ಜೈಪುರ, ಜ.29: ರಾಜಸ್ಥಾನದ ಪಶ್ಚಿಮ ಭಾಗದ ಖ್ಯಾತ ಧಾರ್ಮಿಕ ಪ್ರವಚನಕಾರ್ತಿ ಸಾಧ್ವಿ ಪ್ರೇಮ್ ಬೈಸಾ ಅವರ ನಿಗೂಢ ಸಾವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇಂಜೆಕ್ಷನ್ ನೀಡಿದ ಬಳಿಕ ಅವರು ಅಚಾನಕ್ ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಈ ಘಟನೆಯ ಹಿಂದೆ ಅಸ್ಪಷ್ಟತೆ, ಅನುಮಾನ ಮತ್ತು ಹಲವಾರು ಪ್ರಶ್ನೆಗಳು ಎದ್ದಿವೆ. ಅವರ ಮರಣದ ಸುತ್ತಲೂ ಉಂಟಾಗಿರುವ ಸಂಶಯಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆರ್‌ಎಲ್‌ಪಿ ನಾಯಕ ಹಾಗೂ ಲೋಕಸಭಾ ಸಂಸದ ಹನುಮಾನ್ ಬೆನಿವಾಲ್ ಆಗ್ರಹಿಸಿದ್ದಾರೆ.
ಬುಧವಾರ ಸಂಜೆ (ಜನವರಿ 28) ಬೋರಾನಾಡಾ ಆಶ್ರಮದಲ್ಲಿ ಇದ್ದ ಸಾಧ್ವಿ ಪ್ರೇಮ್ ಬೈಸಾ ಅವರಿಗೆ ತೀವ್ರ ಜ್ವರ ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರ ತಂದೆಯೂ ಆಗಿರುವ ಗುರು ವೀರಂ ನಾಥ್ ಅವರು ಆಶ್ರಮಕ್ಕೆ ಒಬ್ಬ ಆರೋಗ್ಯ ಸಿಬ್ಬಂದಿಯನ್ನು ಕರೆಸಿದ್ದಾರೆ. ಪರೀಕ್ಷೆ ನಡೆಸಿದ ನಂತರ ಆ ಸಿಬ್ಬಂದಿ ಸಾಧ್ವಿಗೆ ಇಂಜೆಕ್ಷನ್ ನೀಡಿದ್ದಾನೆ. ಆದರೆ ಇಂಜೆಕ್ಷನ್ ನೀಡಿದ ಕೇವಲ ಐದು ನಿಮಿಷಗಳಲ್ಲೇ ಸಾಧ್ವಿ ಪ್ರಜ್ಞೆ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಅವರ ಸ್ಥಿತಿ ಗಂಭೀರವಾಗುತ್ತಿದ್ದಂತೆ ತಂದೆ ಹಾಗೂ ಸಹಾಯಕರು ಅವರನ್ನು ಜೋಧಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾಧ್ವಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ವೈದ್ಯ ಪ್ರವೀಣ್ ಜೈನ್ ಅವರು, “ಸಾಧ್ವಿಯನ್ನು ಉಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದರೂ ದೇಹದಲ್ಲಿ ಯಾವುದೇ ಪ್ರತಿಕ್ರಿಯೆ ಕಾಣಿಸಲಿಲ್ಲ” ಎಂದು ತಿಳಿಸಿದ್ದಾರೆ.
ವೈದ್ಯರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ನೀಡುವುದಾಗಿ ಹೇಳಿದರೂ, ಸಾಧ್ವಿಯ ತಂದೆ ಅದನ್ನು ನಿರಾಕರಿಸಿ ತಮ್ಮ ಖಾಸಗಿ ವಾಹನದಲ್ಲೇ ಮೃತದೇಹವನ್ನು ಕರೆದೊಯ್ದಿದ್ದಾರೆ. ಈ ನಡೆ ಕೂಡ ಅನುಮಾನಗಳಿಗೆ ಕಾರಣವಾಗಿದೆ.
ಸಾಧ್ವಿ ಬಹಳ ದಿನಗಳಿಂದ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಅದಕ್ಕಾಗಿ ಕಾಂಪೌಂಡರ್ ಅನ್ನು ಕರೆಸಿ ಚಿಕಿತ್ಸೆ ನೀಡಿಸಿದ್ದೆವು ಎಂದು ತಂದೆ ನಾಥ್ ಹೇಳಿದ್ದಾರೆ. ಆದರೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ಕಾಂಪೌಂಡರ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆತನ ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ನಡುವೆ, ಸಾಧ್ವಿಯ ಸಾವಿನ ಸುಮಾರು ನಾಲ್ಕು ಗಂಟೆಗಳ ನಂತರ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟವಾದ ಒಂದು ಪೋಸ್ಟ್ ಭಾರಿ ಚರ್ಚೆಗೆ ಕಾರಣವಾಗಿದೆ. ಆ ಪೋಸ್ಟ್‌ನಲ್ಲಿ, “ನಾನು ಸನಾತನ ಧರ್ಮದ ಸೇವೆಗೆ ಜೀವನವನ್ನೇ ಅರ್ಪಿಸಿದ್ದೇನೆ. ಆದರೆ ಪ್ರಕೃತಿಗೆ ಏನು ವಿಧಿಸಿತ್ತೋ ಅದು ನಡೆದಿದೆ. ನಾನು ಈ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳುತ್ತಿದ್ದೇನೆ. ನನಗೆ ಸಾವಿನ ನಂತರವಾದರೂ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ” ಎಂದು ಬರೆಯಲಾಗಿದೆ.
ಈ ಸಂದೇಶವನ್ನು ಅವರ ಮೊಬೈಲ್‌ನಿಂದಲೇ ಪೋಸ್ಟ್ ಮಾಡಲಾಗಿದೆ ಎಂದು ತಂದೆ ನಾಥ್ ದೃಢಪಡಿಸಿದ್ದಾರೆ. ಆದರೆ, ಆ ಪೋಸ್ಟ್ ಯಾರು ಕಳುಹಿಸಿದ್ದಾರೆ, ಯಾವ ಸಂದರ್ಭದಲ್ಲಿದು ಪ್ರಕಟವಾಯಿತು ಎಂಬ ಪ್ರಶ್ನೆಗಳು ಗೊಂದಲಕ್ಕೆ ಕಾರಣವಾಗಿವೆ.
ಕಳೆದ ವರ್ಷ ಸಾಧ್ವಿ ಪ್ರೇಮ್ ಬೈಸಾ ಮತ್ತು ಅವರ ತಂದೆ ವಿವಾದಕ್ಕೂ ಒಳಗಾಗಿದ್ದರು. ತಂದೆ ಮಗಳನ್ನು ತಬ್ಬಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಭಾರಿ ಟೀಕೆ ವ್ಯಕ್ತವಾಗಿತ್ತು. ಈ ವಿಡಿಯೊವನ್ನು ತಮ್ಮ ಸಂಬಂಧವನ್ನು ಅವಮಾನಿಸುವ ಉದ್ದೇಶದಿಂದ ಹರಡಲಾಗಿದೆ ಎಂದು ಸಾಧ್ವಿ ಹೇಳಿದ್ದರು. ಪೊಲೀಸರು ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದರು.
ಈ ಹಿಂದಿನ ವಿವಾದ, ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್ ಮತ್ತು ಇಂಜೆಕ್ಷನ್ ನಂತರ ಸಂಭವಿಸಿದ ಸಾವು – ಈ ಎಲ್ಲಾ ಅಂಶಗಳು ಪ್ರಕರಣವನ್ನು ಇನ್ನಷ್ಟು ನಿಗೂಢಗೊಳಿಸಿವೆ. ಹೀಗಾಗಿ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಹನುಮಾನ್ ಬೆನಿವಾಲ್ ಒತ್ತಾಯಿಸಿದ್ದಾರೆ.





