ಮುಂಬೈ / ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಬೆಳಿಗ್ಗೆ 8.45ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಅಜಿತ್ ಪವಾರ್ ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತದ ಸಿಸಿಟಿವಿ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ಖಾಸಗಿ ಚಾರ್ಟರ್ ವಿಮಾನ ಲ್ಯಾಂಡಿಂಗ್‌ಗೆ ಕೆಲವೇ ಕ್ಷಣಗಳು ಬಾಕಿ ಇದ್ದಾಗ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದು ಪತನಗೊಂಡಿದೆ. ವಿಮಾನ ನೆಲಕ್ಕೆ ಅಪ್ಪಳಿಸಿದ ಕ್ಷಣದಲ್ಲೇ ಭಾರೀ ಸ್ಫೋಟ ಸಂಭವಿಸಿ, ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಹೆದ್ದಾರಿ ಪಕ್ಕದಲ್ಲೇ ವಿಮಾನ ಪತನಗೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದ ವೇಳೆ, ಏಕಾಏಕಿ ಆಕಾಶದಿಂದ ವಿಮಾನ ವೇಗವಾಗಿ ಇಳಿದು ನೆಲಕ್ಕಪ್ಪಳಿಸಿದೆ. ಅದಕ್ಕೆ ತಕ್ಷಣವೇ ಭಾರೀ ಸ್ಫೋಟ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಈ ದೃಶ್ಯಗಳು ನೋಡಿದವರ ಮನಸ್ಸನ್ನು ಬೆಚ್ಚಿಬೀಳುವಂತೆ ಮಾಡಿವೆ.
ಅಪಘಾತಕ್ಕೀಡಾದ ವಿಮಾನ ಲಿಯರ್‌ಜೆಟ್ 45ಎಕ್ಸ್‌ಆರ್ ಮಾದರಿಯ ಸಣ್ಣ ಖಾಸಗಿ ವಿಮಾನವಾಗಿತ್ತು. ವಿಮಾನದಲ್ಲಿ ಅಜಿತ್ ಪವಾರ್ ಅವರೊಂದಿಗೆ ಇಬ್ಬರು ಪೈಲಟ್‌ಗಳು ಹಾಗೂ ಮೂವರು ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ದುರಂತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಾವುದೇ ಪ್ರಯಾಣಿಕ ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
Ajit pawar plane crash cctv footage…#AjitPawar pic.twitter.com/WamCNlDxKn
— Sonu Kanojia (@NNsonukanojia) January 28, 2026
ಬಾರಾಮತಿ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಗೋಚರತೆ ಮಟ್ಟ (low visibility) ತೀವ್ರವಾಗಿ ಕುಸಿದಿತ್ತು. ಇದರ ಪರಿಣಾಮವಾಗಿ ಪೈಲಟ್‌ಗಳಿಗೆ ರನ್‌ವೇ ಸ್ಪಷ್ಟವಾಗಿ ಕಾಣದೆ, ವಿಮಾನ ತನ್ನ ದಿಕ್ಕು ತಪ್ಪಿಸಿ ಗುಡ್ಡಗಾಡು ಪ್ರದೇಶದ ಬಂಡೆಗೆ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ.
ಅಜಿತ್ ಪವಾರ್ ಅವರು ಮುಂಬರುವ ಜಿಲ್ಲಾ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಾರಾಮತಿಯಲ್ಲಿ ನಡೆಯಲಿದ್ದ ನಾಲ್ಕು ಸಾರ್ವಜನಿಕ ರ್‍ಯಾಲಿಗಳಲ್ಲಿ ಭಾಗವಹಿಸಲು ಮುಂಬೈನಿಂದ ಪ್ರಯಾಣಿಸುತ್ತಿದ್ದರು. ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಜನಸಂಪರ್ಕ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು.
ಈ ವಿಮಾನ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯದ ಹಲವು ನಾಯಕರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.





