ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತ ಅಮೃತಾಗೌಡ ಅವರಿಗೆ ಧಮ್ಕಿ ಹಾಕಿ, ಕೀಳುಮಟ್ಟದ ಪದಗಳಿಂದ ನಿಂದಿಸಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ರಾಜೀವ್ ಗೌಡನಿಗೆ ನ್ಯಾಯಾಲಯ ಭಾರೀ ಶಾಕ್ ನೀಡಿದೆ. ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶಿಡ್ಲಘಟ್ಟದ ಜೆಎಂಎಫ್ಸಿ ನ್ಯಾಯಾಲಯ ವಜಾ ಮಾಡಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಮಂಗಳೂರು ಮೂಲದ ಉದ್ಯಮಿ ಮೈಕಲ್ ರಿಗೋಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ರಾಜೀವ್ ಪರ ಸಲ್ಲಿಸಲಾದ ನಿಯಮಿತ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಕೋರ್ಟ್ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ನಿಗದಿ ಮಾಡಿದೆ.
ಪ್ರಕರಣದ ಹಿನ್ನೆಲೆ
ಶಿಡ್ಲಘಟ್ಟ ನಗರಸಭಾ ವ್ಯಾಪ್ತಿಯಲ್ಲಿ ಕಲ್ಟ್ ಸಿನಿಮಾದ ಬ್ಯಾನರ್ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಪೌರಾಯುಕ್ತ ಅಮೃತಾಗೌಡ ಅವರಿಗೆ ರಾಜೀವ್ ಗೌಡ ದೂರವಾಣಿ ಮೂಲಕ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪ ಎದುರಿಸುತ್ತಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜೀವ್ ಗೌಡ ತಲೆಮರೆಸಿಕೊಂಡಿದ್ದರು. ಈ ಅವಧಿಯಲ್ಲಿ ಮಂಗಳೂರಿನ ಪಚ್ಚನಾಡಿಯಲ್ಲಿರುವ ಜೇಕ್ ಇಕೋ ಡಿಸೈನ್ ಸ್ಟೋರ್ನಲ್ಲಿ ನಾಲ್ಕು ದಿನಗಳ ಕಾಲ ಅವಿತುಕೊಂಡಿದ್ದರೆಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಬಳಿಕ ಕೇರಳದಲ್ಲಿ ಅಡಗಿದ್ದ ರಾಜೀವ್ ಗೌಡನನ್ನು ಪೊಲೀಸರು ಬಂಧಿಸಿ ಕರ್ನಾಟಕಕ್ಕೆ ಕರೆತಂದಿದ್ದಾರೆ.
ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ
ರಾಜೀವ್ ಗೌಡ ಪರ ವಕೀಲ ವಿವೇಕ್ ಸುಬ್ಬಾರೆಡ್ಡಿ ಕೋರ್ಟ್ನಲ್ಲಿ ವಾದ ಮಂಡಿಸಿ, ಈ ಪ್ರಕರಣದಲ್ಲಿ BNS 132 ಸೆಕ್ಷನ್ ಅನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. ಆರೋಪಿಯು ಸರ್ಕಾರಿ ಅಧಿಕಾರಿಗೆ ಕೇವಲ ಫೋನ್ ಮೂಲಕ ಮಾತನಾಡಿದ್ದು, ಯಾವುದೇ ದೈಹಿಕ ಹಲ್ಲೆ ನಡೆಸಿಲ್ಲ. ಹೀಗಾಗಿ ಈ ಪ್ರಕರಣ ಜಾಮೀನು ನೀಡಬಹುದಾದ ಸ್ವರೂಪದ್ದಾಗಿದ್ದು, ಆರೋಪಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಯಾಗಿ ಸರ್ಕಾರಿ ಪರ ವಕೀಲರು, ಆರೋಪಿಯ ಮೊಬೈಲ್ ಇನ್ನೂ ಸೀಜ್ ಆಗಿಲ್ಲ. 12 ದಿನಗಳ ಕಾಲ ಸಾಕಷ್ಟು ಕಡೆಗಳಲ್ಲಿ ಅಡಗಿದ್ದ ಕಾರಣ ಸಾಕ್ಷ್ಯ ಸಂಗ್ರಹ ಮತ್ತು ಮಹಜರು ಪ್ರಕ್ರಿಯೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ವಾದ ಮಂಡಿಸಿದರು. ಆದರೆ ನ್ಯಾಯಾಧೀಶರು ಪೊಲೀಸ್ ಕಸ್ಟಡಿ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದು, ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ಮೈಕಲ್ಗೆ ಜಾಮೀನು
ರಾಜೀವ್ ಗೌಡನಿಗೆ ಆಶ್ರಯ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಉದ್ಯಮಿ ಮೈಕಲ್ ರಿಗೋಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ತನಿಖೆಗೆ ಸಹಕಾರ ನೀಡುವ ಷರತ್ತಿನೊಂದಿಗೆ ಜಾಮೀನು ನೀಡಲಾಗಿದ್ದು, ಮುಂದಿನ ವಿಚಾರಣೆವರೆಗೆ ಕೋರ್ಟ್ ಸೂಚನೆಗಳನ್ನು ಪಾಲಿಸಬೇಕೆಂದು ಆದೇಶಿಸಿದೆ.
ಕೇರಳದಲ್ಲಿ ಬಂಧನಕ್ಕೊಳಗಾಗಿ ಕರ್ನಾಟಕಕ್ಕೆ ಕರೆತರಲಾದ ರಾಜೀವ್ ಗೌಡ, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ಸಂದರ್ಭದಲ್ಲಿ ಖುಷಿ ಖುಷಿಯಾಗಿ ನಡೆದುಕೊಂಡಿದ್ದು, ಅಭಿಮಾನಿಗಳತ್ತ ಕೈ ಬೀಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಪ್ರಕರಣದಲ್ಲಿ ಮುಂದಿನ ವಿಚಾರಣೆ ಪ್ರಮುಖವಾಗಿದ್ದು, ರಾಜೀವ್ ಗೌಡನ ನಿಯಮಿತ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಮುಂದಿನ ದಿನಗಳಲ್ಲಿ ತೀರ್ಪು ನೀಡಲಿದೆ.





