ಚಿಂತಿಸುವುದು ಮನುಷ್ಯನ ಸಹಜ ಗುಣ. ಆದರೆ, ಅದೇ ಚಿಂತೆ ಮಿತಿಮೀರಿ, ಅತಿಯಾದರೆ ನಮ್ಮ ಜೀವನದ ನೆಮ್ಮದಿಯನ್ನೇ ಕಸಿದುಕೊಳ್ಳುತ್ತದೆ. ಹಿಂದೆ ನಡೆದಿರುವ ಕಹಿ ಘಟನೆಗಳು ಅಥವಾ ಮುಂದೆ ನಡೆಯಬೇಕಿರುವ ಸಂಗತಿಗಳನ್ನ ನೆನೆಯುವುದರಿಂದ, ಪ್ರಸ್ಥುತ ನಾವು ನೆಮ್ಮದಿಯಾಗಿರಲು ಬಿಡುವುದಿಲ್ಲ. ಇದನ್ನು ನಿರ್ಲಕ್ಷಿಸಿದರೆ ಇದು ಕೇವಲ ಮಾನಸಿಕ ಗೊಂದಲಕ್ಕೆ ಸೀಮಿತವಾಗದೆ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಅತಿಯಾದ ಯೋಚನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮ ?
ನಿರಂತರವಾಗಿ ಚಿಂತಿಸುವುದರಿಂದ ದೇಹವು ಸದಾ ಅಲರ್ಟ್ ಸ್ಥಿತಿಯಲ್ಲಿರುತ್ತದೆ. ಇದು ಸ್ನಾಯುಗಳ ಸೆಳೆತ, ಅತಿಯಾದ ಬೆವರುವಿಕೆ, ನಡುಕ ಮತ್ತು ನಿರಂತರ ತಲೆನೋವಿಗೆ ಕಾರನವಾಗುತ್ತದೆ. ವೇಗದ ಹೃದಯ ಬಡಿತ, ರಕ್ತದೊತ್ತಡ ಹೆಚ್ಚಳ ಮತ್ತು ದೀರ್ಘಕಾಲದ ಚಿಂತೆಯಿಂದ ಹೃದಯಾಘಾತದ ಸಂಭವನೀಯತೆ ಹೆಚ್ಚುತ್ತದೆ. ಹೆಚ್ಚಾಗಿ ಆಲೋಚನೆ ಮಾಡಿದರೆ ಮನಸ್ಸು ಶಾಂತವಾಗದೆ ನಿದ್ರೆ ದೂರವಾಗುತ್ತದೆ, ಇದು ಆಯಾಸ ಮತ್ತು ಖಿನ್ನತೆಗೆ ದಾರಿಯಾಗುತ್ತದೆ.
ಸಮಸ್ಯೆಯಿಂದ ಹೊರಬರಲು 5 ಸೂತ್ರಗಳು
1. ಆಂತರಿಕ ಸಂಭಾಷಣೆಯನ್ನು ಸಕಾರಾತ್ಮಕಗೊಳಿಸಿ: ಅತಿಯಾಗಿ ಯೋಚಿಸುವವರು ಹೆಚ್ಚಾಗಿ ತಮ್ಮೊಂದಿಗೆ ನಕಾರಾತ್ಮಕವಾಗಿ ಮಾತನಾಡಿಕೊಳ್ಳುತ್ತಾರೆ (Self-talk). ನನ್ನಿಂದ ಇದು ಸಾಧ್ಯವಿಲ್ಲ ಎನ್ನುವ ಬದಲು ನಾನು ಪ್ರಯತ್ನಿಸುತ್ತೇನೆ ಎಂದು ಬದಲಿಸಿಕೊಳ್ಳಿ. ನಿಮ್ಮ ಆಲೋಚನಾ ಕ್ರಮ ಬದಲಾದಂತೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.
2. ನಕಾರಾತ್ಮಕತೆಗೆ ಗುಡ್‌ಬೈ ಹೇಳಿ: ಯಾವ ವಿಷಯದ ಬಗ್ಗೆ ಯೋಚಿಸಬಾರದು ಎಂದು ನಾವು ಹಠ ಹಿಡಿಯುತ್ತೇವೆಯೋ, ಮೆದುಳು ಅದೇ ವಿಷಯವನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಆದ್ದರಿಂದ, ನಕಾರಾತ್ಮಕ ಆಲೋಚನೆ ಬಂದಾಗ ಅದನ್ನು ತಡೆಯುವ ಬದಲು, ಅದರ ಜಾಗದಲ್ಲಿ ಒಂದು ಸಕಾರಾತ್ಮಕ ಆಲೋಚನೆಯನ್ನು ತುಂಬಿರಿ. ಸೋಲಿನ ಭಯ ಬಂದಾಗ ಹಳೆಯ ಗೆಲುವನ್ನು ನೆನಪಿಸಿಕೊಳ್ಳಿ.
3. ಹಿಂದೆ ನಡೆದಿರುವುದನ್ನ ಅಲ್ಲೇ ಬಿಟ್ಟುಬಿಡಿ: ಹಿಂದೆ ನಡೆದ ತಪ್ಪುಗಳನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಆದ್ದರಿಂದ ನಡೆದ ಘಟನೆಗಳ ಬಗ್ಗೆ ಕೊರಗುವ ಬದಲು, ಅದರಿಂದ ಕಲಿತ ಪಾಠಗಳತ್ತ ಗಮನ ಹರಿಸಿ. ವರ್ತಮಾನದಲ್ಲಿ ಬದುಕುವುದನ್ನು ರೂಢಿಸಿಕೊಳ್ಳಿ.
4. ಡೈರಿ ಬರೆಯುವ ಅಭ್ಯಾಸ: ರಾತ್ರಿ ಮಲಗುವ ಮುನ್ನ ನಿಮ್ಮ ಮನಸ್ಸನ್ನು ಕಾಡುತ್ತಿರುವ ಎಲ್ಲಾ ಚಿಂತೆಗಳನ್ನು ಒಂದು ಪುಸ್ತಕದಲ್ಲಿ ಬರೆಯಿರಿ. ಹೀಗೆ ಮಾಡುವುದರಿಂದ ಮನಸ್ಸಿನ ಭಾರ ಕಡಿಮೆಯಾಗಿ, ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಇದು ಉತ್ತಮ ನಿದ್ರೆಗೂ ಸಹಕಾರಿ.
5. ವಿಶ್ರಾಂತಿ ತಂತ್ರಗಳನ್ನು ಅಳವಡಿಸಿಕೊಳ್ಳಿ: ಅತಿಯಾದ ಆತಂಕ ಉಂಟಾದಾಗ ಸಂಗೀತ ಕೇಳುವುದು, ಇಷ್ಟವಾದ ಪುಸ್ತಕ ಓದುವುದು ಅಥವಾ ದೀರ್ಘವಾದ ಉಸಿರಾಟದ ವ್ಯಾಯಾಮ (Deep Breathing) ಮಾಡುವುದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಅತಿಯಾದ ಯೋಚನೆಯು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ, ಬದಲಾಗಿ ನಿಮ್ಮ ಶಕ್ತಿಯನ್ನು ಕುಂದಿಸುತ್ತದೆ. ಇಂದು ನೀವು ತೆಗೆದುಕೊಳ್ಳುವ ಸಣ್ಣ ನಿರ್ಧಾರ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು.





