ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆಗಾಗಿ ಮಾಡಿದ ಒಂದೇ ಒಂದು ವೀಡಿಯೋ, ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಪ್ರಕರಣ ಕೊನೆಗೂ ಮಹತ್ವದ ತಿರುವು ಪಡೆದುಕೊಂಡಿದೆ. ಖಾಸಗಿ ಬಸ್ಸಿನಲ್ಲಿ ವ್ಯಕ್ತಿಯ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿ ವೀಡಿಯೋ ಹಂಚಿಕೊಂಡಿದ್ದ ಶಿಂಜಿತಾ ಮುಸ್ತಫಾ (Shimjitha Mustafa) ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕೋಯಿಕ್ಕೋಡ್ ಜಿಲ್ಲೆಯ ಬಡಗರದಲ್ಲಿರುವ ಸಂಬಂಧಿಕರ ಮನೆಯಿಂದ ಶಿಂಜಿತಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ನ್ಯಾಯಾಲಯ, ಶಿಂಜಿತಾ ಮುಸ್ತಫಾಳಿಗೆ 4 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಈ ಘಟನೆ ಖಾಸಗಿ ಬಸ್ಸೊಂದರಲ್ಲಿ ನಡೆದಿತ್ತು ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ದೀಪಕ್ (Deepak) ಎಂಬ ಯುವಕ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶಿಂಜಿತಾ ಆರೋಪಿಸಿ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಳು. ವೀಡಿಯೋ ವೈರಲ್ ಆಗುತ್ತಿದ್ದಂತೆ ದೀಪಕ್ ಸಾರ್ವಜನಿಕವಾಗಿ ಅಪಮಾನಕ್ಕೆ ಒಳಗಾಗಿದ್ದರು. ಈ ಮಾನಸಿಕ ಒತ್ತಡವನ್ನು ಸಹಿಸಲಾಗದೆ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದೀಪಕ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಪ್ರಕರಣ ಸಂಪೂರ್ಣವಾಗಿ ತಿರುವು ಪಡೆದುಕೊಂಡಿತ್ತು. ವೀಡಿಯೋದಲ್ಲಿನ ದೃಶ್ಯಗಳನ್ನು ಪರಿಶೀಲಿಸಿದ ಹಲವರು, ಅಲ್ಲಿ ಯಾವುದೇ ಗಲಾಟೆ, ವಾಗ್ವಾದ ಅಥವಾ ದೌರ್ಜನ್ಯ ನಡೆದಿರುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. “ಯಾವುದೇ ತಪ್ಪು ಮಾಡದ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ವೀಡಿಯೋ ಮಾಡಲಾಗಿದೆ” ಎಂಬ ಆರೋಪಗಳು ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ದೀಪಕ್ ಅವರ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದರು. ದೂರಿನ ಆಧಾರದ ಮೇಲೆ ಪೊಲೀಸರು ಜಾಮೀನು ರಹಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದರು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಶಿಂಜಿತಾ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಳು. ಹಲವು ದಿನಗಳ ಹುಡುಕಾಟದ ನಂತರ ಆಕೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ, ಕಂಡಕ್ಟರ್ ಹಾಗೂ ಇತರ ಪ್ರಯಾಣಿಕರಿಂದ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಎಲ್ಲರೂ ಸಹ ಪ್ರಯಾಣದ ವೇಳೆ ಯಾವುದೇ ಅಸಾಮಾನ್ಯ ಘಟನೆ ಅಥವಾ ಜಗಳ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಂಡಕ್ಟರ್ ಕೂಡ, ಶಿಂಜಿತಾ ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ಯಾವುದೇ ಸಹಾಯ ಕೋರಿಲ್ಲ ಎಂದು ಹೇಳಿದ್ದಾರೆ.
ವಿಡಿಯೋ ಚಿತ್ರೀಕರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಹಿಂದಿನ ಉದ್ದೇಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





