ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಎಲ್ಲವನ್ನೂ ಅಪಹಾಸ್ಯ ಮಾಡುವ ಪರವಾನಗಿ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಚಾನೆಲ್ ಮತ್ತು ನಿರ್ದೇಶಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಮನೋರಂಜನೆಯ ಹೆಸರಿನಲ್ಲಿ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವುದನ್ನು ಕಟುವಾಗಿ ಟೀಕಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇವತೆಗಳನ್ನು ಪ್ರಯೋಜನವಿಲ್ಲದವರು ಎಂಬಂತೆ ಬಿಂಬಿಸುವುದನ್ನು ಒಪ್ಪಲಾಗದು. ಇಂತಹ ತುಚ್ಛ ಪ್ರದರ್ಶನ ನೀಡುವವರು ನ್ಯಾಯಾಲಯದಿಂದ ಯಾವುದೇ ರಕ್ಷಣೆಯನ್ನು ನಿರೀಕ್ಷಿಸಬಾರದು ಎಂದು ನ್ಯಾಯಮೂರ್ತಿಗಳು ಕಿಡಿಕಾರಿದ್ದಾರೆ.
ಪ್ರಕರಣದ ಹಿನ್ನೆಲೆ
ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸ್ಕಿಟ್ ಒಂದರಲ್ಲಿ ಹಿಂದೂ ಪೌರಾಣಿಕ ಪಾತ್ರಗಳನ್ನು ಹಾಸ್ಯ ಮಾಡಿ, ಧಾರ್ಮಿಕ ಘನತೆಗೆ ಕುಂದು ತರಲಾಗಿದೆ ಎಂದು ಆರೋಪಿಸಿ ಪ್ರಶಾಂತ್ ಶಶಿಧರ್ ನರಗುಂದ ಎಂಬುವವರು ದೂರು ನೀಡಿದ್ದರು.ಇದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 299ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಮೊದಲು ಹುಬ್ಬಳ್ಳಿಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ನಂತರ ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.
ವಾಹಿನಿಯ ಸಮರ್ಥನೆ
ವಾಹಿನಿಯ ಪರ ವಕೀಲರು, ಇದು ನೇರವಾಗಿ ದೇವರನ್ನು ಉದ್ದೇಶಿಸಿದ ಸ್ಕಿಟ್ ಅಲ್ಲ, ಹಳ್ಳಿಯ ನಾಟಕದ ರಿಹರ್ಸಲ್ ಹೇಗಿರುತ್ತದೆ ಎಂಬ ಹಾಸ್ಯದ ಭಾಗವಾಗಿತ್ತು ಎಂದು ವಾದಿಸಿ ತನಿಖೆಯನ್ನು ರದ್ದುಗೊಳಿಸಲು ಕೋರಿದರು. ಆದರೆ, ತನಿಖೆಯನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್, ತನಿಖೆ ಮುಂದುವರಿಸಲು ಹಸಿರು ನಿಶಾನೆ ತೋರಿಸಿದೆ.
ತನಿಖೆಗೆ ಸೂಚನೆ:
ಪ್ರಕರಣದ ತೀವ್ರತೆಯನ್ನು ಪರಿಗಣಿಸಿದ ನ್ಯಾಯಾಲಯವು, ವಾಹಿನಿಯ ಪ್ರತಿನಿಧಿಗಳು ಮತ್ತು ನಿರ್ದೇಶಕರು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂಬ ಷರತ್ತಿನ ಮೇಲೆ ಸದ್ಯಕ್ಕೆ ಅವರನ್ನು ಬಂಧಿಸದಂತೆ ಮಧ್ಯಂತರ ಆದೇಶ ನೀಡಿದೆ. ಧಾರ್ಮಿಕ ಭಾವನೆಗಳ ವಿಚಾರದಲ್ಲಿ ಅತ್ಯಂತ ಜಾಗರೂಕತೆಯಿಂದ ಇರಬೇಕು ಮತ್ತು ಮನೋರಂಜನೆಯು ಸಮಾಜದ ಶಾಂತಿಯನ್ನು ಕದಡಬಾರದು ಎಂದು ಎಚ್ಚರಿಕೆ ನೀಡಿದೆ.
ಸೃಜನಶೀಲತೆಯ ಹೆಸರಿನಲ್ಲಿ ಧರ್ಮ ಮತ್ತು ದೇವತೆಗಳನ್ನು ಅಪಹಾಸ್ಯ ಮಾಡುವುದು ಕಾನೂನು ಕ್ರಮಕ್ಕೆ ದಾರಿ ಮಾಡಿಕೊಡುತ್ತದೆ. ಮುಂದಿನ ದಿನದಲ್ಲಿ ಈ ರೀತಿ ತಪ್ಪುಗಳಾದರೆ ತೀವ್ರ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.





