ನವದೆಹಲಿ: ಪಾಕಿಸ್ತಾನದಲ್ಲಿ ಸಿಲುಕಿಕೊಂಡಿರುವ ಭಾರತೀಯ ಮಹಿಳೆಯೊಬ್ಬರ ಹೃದಯವಿದ್ರಾವಕ ಆಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. “ನಾನು ತಪ್ಪು ಮಾಡಿದೆ… ದಯವಿಟ್ಟು ಭಾರತಕ್ಕೆ ಕರೆತನ್ನಿ” ಎಂದು ಅಳುತ್ತಾ ಮನವಿ ಮಾಡುತ್ತಿರುವ ಅವರ ಧ್ವನಿ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದೆ.
ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಅಮಾನಿಪುರ ಗ್ರಾಮದ ನಿವಾಸಿಯಾದ 48 ವರ್ಷದ ಸರಬೀತ್ ಕೌರ್, 2025ರ ನವೆಂಬರ್‌ನಲ್ಲಿ ಗುರುನಾನಕ್ ದೇವ್ ಅವರ 556ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಸಿಖ್ ಯಾತ್ರಾ ಗುಂಪಿನೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದರು. ವಾಘಾ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶಿಸಿದ ಸುಮಾರು 2,000 ಸಿಖ್ ಯಾತ್ರಿಕರ ಪೈಕಿ ಸರಬೀತ್ ಕೂಡ ಒಬ್ಬರಾಗಿದ್ದರು. ಉತ್ಸವದ ಬಳಿಕ ಬಹುತೇಕ ಎಲ್ಲಾ ಯಾತ್ರಿಕರು ಭಾರತಕ್ಕೆ ಮರಳಿದರೂ, ಸರಬೀತ್ ಮಾತ್ರ ಮರಳಿರಲಿಲ್ಲ.
ನಂತರ ಪಾಕಿಸ್ತಾನದ ಲಾಹೋರ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ, ಪಾಕಿಸ್ತಾನಕ್ಕೆ ಬಂದ ಒಂದು ದಿನದೊಳಗೆ ಸರಬೀತ್ ಕೌರ್ ಅವರು ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಲಾಹೋರ್‌ನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶದಲ್ಲಿ ನಿಕಾಹ್ ಸಮಾರಂಭ ನಡೆದಿದ್ದು, ಮದುವೆಗೆ ಮುನ್ನ ಸರಬೀತ್ ಅವರಿಗೆ ‘ನೂರ್’ ಎಂಬ ಮುಸ್ಲಿಂ ಹೆಸರು ಇಡಲಾಗಿದೆ ಎನ್ನಲಾಗಿದೆ.
ಆದರೆ ಇದೀಗ ವೈರಲ್ ಆಗಿರುವ ಆಡಿಯೋದಲ್ಲಿ, ಸರಬೀತ್ ಕೌರ್ ತಮ್ಮ ಭಾರತದಲ್ಲಿರುವ ಪತಿ ಕರ್ನೈಲ್ ಸಿಂಗ್ ಅವರೊಂದಿಗೆ ಮಾತನಾಡುತ್ತಾ, ಪಾಕಿಸ್ತಾನದಲ್ಲಿ ತಾವು ಅನುಭವಿಸುತ್ತಿರುವ ಕಷ್ಟಗಳನ್ನು ವಿವರಿಸುತ್ತಿದ್ದಾರೆ. “ನನ್ನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಲಾಗಿದೆ. ಇಲ್ಲಿ ನನಗೆ ಸ್ವಾತಂತ್ರ್ಯವೇ ಇಲ್ಲ. ನನ್ನ ಇಚ್ಛೆಗೆ ವಿರುದ್ಧವಾಗಿ ಬಂಧಿಸಲಾಗಿದೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಆಡಿಯೋದಲ್ಲಿ ಅವರು, “ನನಗೆ ಇಲ್ಲಿ ತುಂಬಾ ಕಷ್ಟ ಆಗುತ್ತಿದೆ. ಪ್ರತಿ ಪೈಸೆಗಾಗಿ ಹೋರಾಡಬೇಕಾಗಿದೆ. ಧರಿಸಲು ಸರಿಯಾದ ಬಟ್ಟೆಯೂ ಇಲ್ಲ. ನನ್ನ ಮಕ್ಕಳಿಂದ ದೂರವಾಗಿದ್ದೇನೆ. ನಾನು ಅವರನ್ನು ಚಿಕ್ಕವರಾಗಿದ್ದಾಗಿನಿಂದ ಬೆಳೆಸಿದ್ದೇನೆ. ಈಗ ಅವರ ಬಳಿಗೆ ಮರಳಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.
ಸರಬೀತ್ ಅವರ ಪತಿ ಕರ್ನೈಲ್ ಸಿಂಗ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ನನ್ನ ಪತ್ನಿಗೆ ಬಂದೂಕು ತೋರಿಸಿ, ಬೆದರಿಕೆ ಹಾಕಿ ಬಲವಂತವಾಗಿ ಮದುವೆ ಮಾಡಲಾಗಿದೆ. ಮತಾಂತರಕ್ಕೂ ಒತ್ತಾಯಿಸಲಾಗಿದೆ. ಈ ಎಲ್ಲಾ ಘಟನೆಗಳಿಗೆ ಸಂಬಂಧಿಸಿದ ಆಡಿಯೋ ಮತ್ತು ದಾಖಲೆಗಳು ನನ್ನ ಬಳಿ ಇವೆ” ಎಂದು ಅವರು ಹೇಳಿದ್ದಾರೆ. ಬಂಧನದ ಸಮಯದಲ್ಲಿ ಸರಬೀತ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದೂ ಅವರು ತಿಳಿಸಿದ್ದಾರೆ.
ಕಳೆದ ವಾರ ಪಾಕಿಸ್ತಾನಿ ಅಧಿಕಾರಿಗಳು ಸರಬೀತ್ ಕೌರ್ ಅವರನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಗಡಿಪಾರು ಮಾಡಲು ಸಿದ್ಧತೆ ನಡೆಸಿದ್ದರು ಎಂಬ ವರದಿಗಳು ಹೊರಬಿದ್ದಿದೆ. ಆದರೆ ಯಾವುದೇ ಅಧಿಕೃತ ಕಾರಣ ನೀಡದೆ, ಆ ಕ್ರಮವನ್ನು ಹಠಾತ್ತನೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ಇದರಿಂದ ಕುಟುಂಬದ ಆತಂಕ ಮತ್ತಷ್ಟು ಹೆಚ್ಚಾಗಿದೆ.





