ಕನ್ನಡಿಗರ ಹೆಮ್ಮೆಯ ಕ್ರಿಕೆಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಬಾರಿ ಮಕರ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟ ಹಾಗೂ ಸಾಂಸ್ಕೃತಿಕ ಶೈಲಿಯಲ್ಲಿ ಆಚರಿಸಿದೆ. ನಾಡಿನ ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವಂತೆ, ಆರ್‌ಸಿಬಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಕರ್ನಾಟಕದ ಸಮಸ್ತ ಜನತೆಗೆ ಹಾರ್ದಿಕ ಮಕರ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದೆ.
“ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಎಂಬ ಸರಳ ಆದರೆ ಅರ್ಥಪೂರ್ಣ ಸಾಲಿನೊಂದಿಗೆ ಹಬ್ಬದ ಶುಭಾಶಯವನ್ನು ಹಂಚಿಕೊಂಡಿದೆ. ಆರ್‌ಸಿಬಿಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ಹಂಚಿಕೊಂಡಿರುವ ಪೋಸ್ಟ್‌ನ ವಿಶೇಷತೆ ಎಂದರೆ, ಅದರಲ್ಲಿ ಮಹಿಳಾ ಮತ್ತು ಪುರುಷ ಕ್ರಿಕೆಟ್ ತಂಡದ ಆಟಗಾರರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಟಗಾರರು ಕೇವಲ ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲದೆ, ನಾಡಿನ ಸಂಸ್ಕೃತಿಯಲ್ಲೂ ತಮ್ಮನ್ನು ಬೆಸೆಯುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
“ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ.” ನಾಡಿನ ಸಮಸ್ತ ಜನರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು! 🌾🙌
Here’s wishing everyone a joyful and prosperous Makara Sankranti, filled with sweetness, warmth, and new beginnings. 😊🌾#PlayBold #MakaraSankranti #ನಮ್ಮRCB pic.twitter.com/PTOfKfE5Wj
— Royal Challengers Bengaluru (@RCBTweets) January 15, 2026
ಪೋಸ್ಟ್‌ನ ಡಿಸೈನ್ ಕೂಡ ಗಮನ ಸೆಳೆಯುವಂತಿದೆ. ಒಂದು ಕಡೆ ಆರ್‌ಸಿಬಿಯ ಹೆಸರು ಹಾಗೂ ಚಿಹ್ನೆ ಹೊಂದಿರುವ ಗಾಳಿಪಟ ಆಕಾಶದಲ್ಲಿ ಹಾರುತ್ತಿರುವಂತೆ ಚಿತ್ರಿಸಲಾಗಿದೆ. ಮಕರ ಸಂಕ್ರಾಂತಿ ಎಂದರೆ ಗಾಳಿಪಟಗಳ ಹಬ್ಬ ಎಂಬ ಭಾವನೆಯನ್ನು ಈ ವಿನ್ಯಾಸ ಸುಂದರವಾಗಿ ತೋರಿಸುತ್ತದೆ. ಅದೇ ಸಮಯದಲ್ಲಿ, ಆರ್‌ಸಿಬಿಯ ಗಾಳಿಪಟ ಆಕಾಶದತ್ತ ಏರುತ್ತಿರುವುದು ಈ ಬಾರಿ “ಕಪ್ ನಮ್ಮದೇ” ಎಂಬ ನಿರೀಕ್ಷೆಯ ಸಂಕೇತವಾಗಿ ಅಭಿಮಾನಿಗಳಿಗೆ ಕಾಣುತ್ತಿದೆ.
ರಾಜ್ಯದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗ್ರಾಮೀಣ ಭಾಗಗಳಿಂದ ನಗರ ಪ್ರದೇಶಗಳವರೆಗೂ ಹಬ್ಬದ ವಾತಾವರಣ ಮನೆಮಾಡಿದೆ. ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತಿದೆ.. ಮಕ್ಕಳು ಮತ್ತು ಯುವಕರು ಗಾಳಿಪಟ ಹಾರಿಸಿ ಸಂಭ್ರಮಿಸುತ್ತಿದ್ದು, ಮನೆಮನೆಗಳಲ್ಲಿ ಎಳ್ಳು ಬೆಲ್ಲ ಹಂಚುವ ಸಂಪ್ರದಾಯ ಮುಂದುವರಿದಿದೆ.
ಎಳ್ಳು ಬೆಲ್ಲ ಹಂಚುವುದು ಕೇವಲ ಸಿಹಿತಿನಿಸು ನೀಡುವ ಸಂಪ್ರದಾಯವಲ್ಲ, ಅದು ಜೀವನದಲ್ಲಿ ಸಿಹಿ-ಕಹಿ ಅನುಭವಗಳನ್ನು ಸಮನಾಗಿ ಸ್ವೀಕರಿಸಿ, ಪರಸ್ಪರ ಒಳ್ಳೆಯ ಮಾತುಗಳಿಂದ ಬದುಕನ್ನು ಸುಂದರಗೊಳಿಸಬೇಕೆಂಬ ಸಂದೇಶವನ್ನೂ ಹೊತ್ತಿದೆ. ಈ ಅರ್ಥಪೂರ್ಣ ಸಂಪ್ರದಾಯವನ್ನು ಆರ್‌ಸಿಬಿ ತನ್ನ ಪೋಸ್ಟ್ ಮೂಲಕ ಸ್ಮರಿಸಿರುವುದು ಅಭಿಮಾನಿಗಳಲ್ಲಿ ವಿಶೇಷ ಸಂತಸ ತಂದಿದೆ.





