ಧಾರವಾಡ : ಯುವಶಕ್ತಿಯ ಸ್ಫೂರ್ತಿ ಸೆಲೆ, ಸಿಡಿಲ ಸಂತ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಧಾರವಾಡದ ಜೆಎಸ್ಎಸ್ ಕಾಲೇಜಿನ ಉತ್ಸವ ಸಭಾಂಗಣದಲ್ಲಿ ಸೋಮವಾರ (ಜ. 12, 2026) ಅರ್ಥಪೂರ್ಣ ಕಾರ್ಯಕ್ರಮ ಜರುಗಿತು. ಸ್ವಾಮಿ ವಿವೇಕಾನಂದ ರಕ್ತದಾನ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಸಮಾರಂಭದಲ್ಲಿ ‘ವಿವೇಕ ಜಾಗೃತಿ ಜಾಥಾ’ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ರಾಜ್ಯ ಮಟ್ಟದ ‘ವಿವೇಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹುಬ್ಬಳ್ಳಿಯ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ಡಾ. ಸಿಎಚ್. ವಿ.ಎಸ್.ವಿ. ಪ್ರಸಾದ್ ಅವರು, ಸ್ವಾಮಿ ವಿವೇಕಾನಂದರ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ ದೊಡ್ಡದಿದೆ ಎಂದು ಹೇಳಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ನವಲಗುಂದದ ಶ್ರೀ ಶಾರದೇಶ್ವರಿ ಆಶ್ರಮದ ಅಧ್ಯಕ್ಷೆ ಪರಮಪೂಜ್ಯ ಅನನ್ಯಮಯಿ ಮಾತಾಜಿಯವರು ಪ್ರಶಸ್ತಿ ಪ್ರಧಾನ ಮಾಡಿದರು. ಜನತಾ ಶಿಕ್ಷಣ ಸಮಿತಿ ನಿರ್ದೇಶಕರಾದ ಡಾ. ಅಜಿತ್ ಪ್ರಸಾದ್, ಡಾ. ದಾಕ್ಷಾಯಣಿ ಸಿ ರಾಮನಗೌಡರ, ಸ್ನೇಹಮಯಿ ಬ್ಲಡ್ ಆರ್ಮಿ ಅಕ್ಕಿಆಲೂರ ರಕ್ತ ಸೈನಿಕ ಶ್ರೀ ಕರಬಸಪ್ಪ ಗೊಂದಿ, ಡಾ. ಹನುಮಂತ ವಿ ಡಂಬಳ, ಡಾ. ಎಂ. ಬಿ. ದಳಪತಿ, ಡಾ. ನಾಗಲಿಂಗ ಮೂರಗಿ ಪ್ರಶಸತಿ ಪುರಸ್ಕೃತರಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಅಜಿತ್ ಪ್ರಸಾದ್ ಅವರು, ಶಿಕ್ಷಣದ ಮೂಲಕ ವಿವೇಕಾನಂದರ ತತ್ವಗಳನ್ನು ಪ್ರಸಾರ ಮಾಡುವುದು ಸಂಸ್ಥೆಯ ಗುರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ರಕ್ತ ಸೈನಿಕ ಕರಬಸಪ್ಪ ಗೊಂದಿ ಅವರು ರಕ್ತದಾನದ ಮಹತ್ವವನ್ನು ವಿವರಿಸಿದರು.
ಸ್ವಾಮಿ ವಿವೇಕಾನಂದ ಫೌಂಡೇಶನ್ ಉಪಾಧ್ಯಕ್ಷ ವಿದ್ಯಾನಂದ ಸ್ಥಾವರಮಠ ಅವರು ಸಂಸ್ಥೆಯ ಚಟುವಟಿಕೆಗಳ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ರಕ್ತದಾನ ಫೌಂಡೇಶನ್‌ನ ಸಂಸ್ಥಾಪಕ ಶಿವಕುಮಾರ ರಟ್ಟಿಹಳ್ಳಿ ಅವರ ಸಾಮಾಜಿಕ ಕಳಕಳಿಯನ್ನು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು. ವಿಶೇಷ ಉಪನ್ಯಾಸ ನೀಡಿದ ಕಿರಣ್ ರಾಮ್ ಅವರು ವಿವೇಕಾನಂದರ ಜೀವನದ ಪ್ರಮುಖ ಘಟ್ಟಗಳನ್ನು ನೆರೆದಿದ್ದವರಿಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫೌಂಡೇಶನ್ ಅಧ್ಯಕ್ಷ ಡಾ. ಆದರ್ಶ ಜಿ.ಎಸ್. ಅವರು ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು. ವೇದಿಕೆಯಲ್ಲಿ ಜೆಎಸ್ಎಸ್ ಪ್ರಾಧ್ಯಾಪಕರು ಹಾಗೂ ಫೌಂಡೇಶನ್‌ನ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.





