ಬೆಂಗಳೂರು: ಕೃತಕ ಬುದ್ಧಿಮತ್ತೆ ಅಥವಾ ಎಐ (Artificial Intelligence) ಮೂಲಕ ಸೃಷ್ಟಿಸಲಾದ ಸುಂದರ ಯುವತಿಯರ ಚಿತ್ರಗಳನ್ನು ಬಳಸಿ ಯುವಕರನ್ನು ಬಲೆಗೆ ಬೀಳಿಸುವ ‘ಎಐ ಹನಿ ಟ್ರ್ಯಾಪಿಂಗ್’ ಜಾಲ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ನಗರದ 26 ವರ್ಷದ ಯುವಕನೊಬ್ಬ ಇಂತಹದ್ದೇ ಒಂದು ಜಾಲಕ್ಕೆ ಸಿಲುಕಿ ಬರೋಬ್ಬರಿ 1.53 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ.
ಬೆಂಗಳೂರಿನ ನಿವಾಸಿಯಾದ ಸಂತ್ರಸ್ತ ಯುವಕ ಇತ್ತೀಚೆಗೆ ‘Happn’ ಎಂಬ ಪ್ರಸಿದ್ಧ ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದ. ಅಲ್ಲಿ ಆತನಿಗೆ ‘ಇಶಾನಿ’ ಎಂಬ ಹೆಸರಿನ ಸುಂದರ ಯುವತಿಯ ಪ್ರೊಫೈಲ್‌ನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಆ ಖಾತೆಯ ಫೋಟೋಗಳು ಎಐ ಎಂದು ಎಂದು ಇಂಚಿತ್ತು ಸಂಶಯ ಬರದ ರೀತಿಯಲ್ಲಿತ್ತು. ಆರಂಭದಲ್ಲಿ ಸಾಮಾನ್ಯ ಚಾಟಿಂಗ್ ಮೂಲಕ ಶುರುವಾದ ಇವರ ಸ್ನೇಹ, ನಂತರ ಮೊಬೈಲ್ ಸಂಖ್ಯೆ ಹಂಚಿಕೊಳ್ಳುವ ಹಂತಕ್ಕೆ ಇವರ ಸ್ನೇಹ ತಲುಪಿತು.
ಕೆಲವು ದಿನಗಳ ಕಾಲ ವಾಟ್ಸಾಪ್‌ನಲ್ಲಿ ಖಾಸಗಿ ವಿಚಾರಗಳನ್ನು ಚಾಟಿಂಗ್ ಮಾಡಿದ ನಂತರ, ಆಕೆಯ ಮೊಬೈಲ್‌ನಿಂದ ವಿಡಿಯೋ ಕಾಲ್ ಬಂದಿದೆ. ಕಾಲ್ ಸ್ವೀಕರಿಸಿದಾಗ ಆ ಯುವತಿ (ಎಐ ಸೃಷ್ಟಿತ ವಿಡಿಯೋ) ಬೆತ್ತಲಾಗಿದ್ದಳು. ಆಕೆಯ ಮಾತು ನಂಬಿದ ಯುವಕ ಕೂಡ ತನ್ನ ಬಟ್ಟೆ ಬಿಚ್ಚಿದ್ದಾನೆ. ಇದನ್ನೇ ಕಾಯುತ್ತಿದ್ದ ಆರೋಪಿಗಳು ಸ್ಕ್ರೀನ್ ರೆಕಾರ್ಡಿಂಗ್ ಮೂಲಕ ಯುವಕ ಬೆತ್ತಲಾಗಿರುವ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.
ವಿಡಿಯೋ ಕಾಲ್ ಮುಗಿಯುತ್ತಿದ್ದಂತೆಯೇ ಯುವತಿಯ ರೂಪದಲ್ಲಿದ್ದ ಸೈಬರ್ ಕಳ್ಳರು ತಮ್ಮ ಅಸಲಿ ರೂಪ ತೋರಿಸಿದ್ದಾರೆ. ಯುವಕನ ಬೆತ್ತಲೆ ವಿಡಿಯೋಗಳನ್ನು ಆತನಿಗೆ ಕಳುಹಿಸಿ, ಹಣ ನೀಡದಿದ್ದರೆ ಇದನ್ನು ನಿನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತೇವೆ ಎಂದು ಬೆದರಿಸಿದ್ದಾರೆ. ಭಯದಿಂದ ಯುವಕ ಹಂತ ಹಂತವಾಗಿ ಒಟ್ಟು 1.53 ಲಕ್ಷ ರೂ. ಹಣವನ್ನು ಆರೋಪಿಗಳು ನೀಡಿದ ಅಕೌಂಟ್‌ಗಳಿಗೆ ವರ್ಗಾಯಿಸಿದ್ದಾನೆ.
ಸೈಬರ್ ವಚಕರು ಮತ್ತೆ ಮತ್ತೆ ಹಣ ಕೇಳಿದ್ದಾರೆ, ಇದನ್ನ ತಾಳಲಾಗದೇ ದಾರಿ ಕಾಣದ ಯುವಕ ಕೇಂದ್ರ ಸೆನ್ (CEN) ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ಸಾಮಾನ್ಯ ಹನಿ ಟ್ರ್ಯಾಪ್ ಅಲ್ಲ, ಬದಲಿಗೆ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಯುವತಿಯ ಮುಖ ಮತ್ತು ವಿಡಿಯೋ ಎಂದು ತಿಳಿದುಬಂದಿದೆ. ಆ ಸಾಮಾಜಿಕ ಖಾತೆಯನ್ನ ಇಶಾನಿ ಎಂಬ ಯಾವ ಯುವತಿಯೂ ಬಳಸುತ್ತಿರಲಿಲ್ಲ ಬದಲಿಗೆ ಅದು ಅವಳು ಕೇವಲ ಸಾಫ್ಟ್‌ವೇರ್ ಸೃಷ್ಟಿಸಿದ ಖಾತೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಸದ್ಯ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಗಳ ಬ್ಯಾಂಕ್ ಖಾತೆ ಮತ್ತು ಐಪಿ ಅಡ್ರೆಸ್‌ಗಳ ಮೂಲಕ ಅವರ ಪತ್ತೆಗೆ ಜಾಲ ಬೀಸಿದ್ದಾರೆ. ಅಪರಿಚಿತರ ವಿಡಿಯೋ ಕಾಲ್‌ಗಳಿಗೆ ಸ್ಪಂದಿಸುವಾಗ ಮತ್ತು ಡೇಟಿಂಗ್ ಆ್ಯಪ್‌ಗಳಲ್ಲಿ ಅಪರಿಚಿತರನ್ನು ನಂಬುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.





