ಹಾಸನ: ಜನ್ಮ ನೀಡಿದ ತಂದೆಯನ್ನೇ ಮಗ ರಾಡ್‌ನಿಂದ ಹೊಡೆದು ಕೊಂದಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಸಂಭವಿಸಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಕೊಲೆಯಾದ ವ್ಯಕ್ತಿಯನ್ನು 60 ವರ್ಷದ ಸತೀಶ್ ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿ ಸತೀಶ್ ಅವರ ಪುತ್ರ 28 ವರ್ಷದ ರಂಜಿತ್. ಹಿರಿಸಾವೆ ಗ್ರಾಮದ ನಿವಾಸಿಯಾಗಿದ್ದ ಸತೀಶ್ ಅವರು ತಮ್ಮ ಕುಟುಂಬದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಂಜಿರ್‌ನ ತಂದೆ ಸತೀಶ್ ಅಕ್ರಮ ಸಂಬಂಧವನ್ನು ಹೊಂದಿದ್ದರು. ಇದು ಈ ಕೊಲೆಗೆ ಪ್ರಮುಖ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸತೀಶ್ ಅವರ ನಡವಳಿಕೆಯಿಂದ ಬೇಸತ್ತಿದ್ದ ಪತ್ನಿ ನಿರ್ಮಲ ಹಾಗೂ ಮಗ ರಂಜಿತ್, ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ತಂದೆಯ ಹಾದಿ ತಪ್ಪಿದ ವರ್ತನೆ ಮತ್ತು ಅಕ್ರಮ ಸಂಬಂಧದ ವಿಚಾರವಾಗಿ ರಂಜಿತ್ ಪದೇ ಪದೇ ತಂದೆಯನ್ನು ಪ್ರಶ್ನಿಸುತ್ತಿದ್ದನು. ಈ ಸಂಬಂಧ ತಂದೆ-ಮಗನ ನಡುವೆ ಆಗಾಗ್ಗೆ ತೀವ್ರ ವಾಗ್ವಾದಗಳು ನಡೆಯುತ್ತಿದ್ದವು.
ಶನಿವಾರ ರಾತ್ರಿ ಸತೀಶ್ ಮತ್ತು ರಂಜಿತ್ ನಡುವೆ ಮತ್ತೊಮ್ಮೆ ಇದೇ ವಿಚಾರಕ್ಕೆ ದೊಡ್ಡ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಜಗಳ ತಾರಕಕ್ಕೇರಿದಾಗ ಆಕ್ರೋಶಗೊಂಡ ರಂಜಿತ್, ಮನೆಯಲ್ಲಿದ್ದ ಸ್ಟೀಲ್ ರಾಡ್ ತೆಗೆದುಕೊಂಡು ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾದ ಕಾರಣ ಸತೀಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಹಿರಿಸಾವೆ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿ ರಂಜಿತ್‌ನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ವಿಡೀಯೋ ಹರಿಬಿಟ್ಟಿದ್ದ ಆರೋಪಿಗಳನ್ನ ಥಳಿಸಿ, ಪೊಲೀಸ್‌ಗೆ ಒಪ್ಪಿಸಿದ ಸ್ಥಳೀಯರು..!
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಿರಾತಕರು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಆರೋಪಿಗಳನ್ನು ಹಿಡಿದು ತಲೆ ಬೋಳಿಸಿ, ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ್ದಾರೆ.
ಜನವರಿ 9 ರಂದು ಹುಬ್ಬಳ್ಳಿಯ ಅಂಬೇಡ್ಕರ್ ಮೈದಾನದ ಬಳಿಯಿದ್ದ ಮಹಿಳೆಯನ್ನು ಆರೋಪಿಗಳಾದ ಶಿವಾನಂದ್ ಮತ್ತು ಗಣೇಶ್ ಎಂಬುವವರು ಆಟೋದಲ್ಲಿ ಕರೆದುಕೊಂಡು ಹೋಗಿದ್ದರು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಕಾಮುಕರು, ಕೃತ್ಯದ ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಿಕೃತಿ ಮೆರೆದಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಸಾರ್ವಜನಿಕರು ಆರೋಪಿಗಳಾದ ಶಿವಾನಂದ್ ಹಾಗೂ ಗಣೇಶ್‌ನನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜನರು, ಆರೋಪಿಗಳ ತಲೆ ಬೋಳಿಸಿ ರಸ್ತೆಯಲ್ಲೇ ಮನಬಂದಂತೆ ಥಳಿಸಿದ್ದಾರೆ. ಬಳಿಕ ಅವರನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳನ್ನು ಥಳಿಸಿ ಪೊಲೀಸರಿಗೊಪ್ಪಿಸಿದ ನಾಲ್ವರು ಸ್ಥಳೀಯರ ವಿರುದ್ಧವೂ ಪೊಲೀಸರು ದೂರು ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ಅತ್ಯಾಚಾರದಂತಹ ಘೋರ ಕೃತ್ಯ ನಡೆದಾಗ ಜನರೇ ಮುಂದೆ ಬಂದು ಕಾಮುಕರನ್ನು ಹಿಡಿದುಕೊಟ್ಟಿದ್ದಾರೆ. ಹೀಗಿರುವಾಗ ಸಹಾಯ ಮಾಡಿದವರ ಮೇಲೆಯೇ ಕೇಸ್ ಹಾಕಿದರೆ, ಮುಂದಿನ ದಿನಗಳಲ್ಲಿ ಇಂತಹ ಅನ್ಯಾಯ ನಡೆದಾಗ ರಕ್ಷಣೆಗೆ ಯಾರು ಬರುತ್ತಾರೆ ? ಎಂದು ಪ್ರಶ್ನಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮುಂದೆ ನೂರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.





