ಮುಂಬೈ: ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಅಮೆರಿಕದ ಪಡೆಗಳು ಬಂಧಿಸಿ ನ್ಯೂಯಾರ್ಕ್ಗೆ ಕರೆದೊಯ್ದ ಬೆನ್ನಲ್ಲೇ, ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚೌಹಾಣ್ ನೀಡಿರುವ ಹೇಳಿಕೆ ದೇಶಾದ್ಯಂತ ದೊಡ್ಡ ಸಂಚಲನ ಮೂಡಿಸಿದೆ. ಟ್ರಂಪ್ ಅವರು ಮಡುರೋ ಅವರನ್ನು ಕಿಡ್ನಾಪ್ ಮಾಡಿದಂತೆ ಪ್ರಧಾನಿ ಮೋದಿಯನ್ನೂ ಕಿಡ್ನಾಪ್ ಮಾಡಬಹುದೇ ? ಎಂದು ಪ್ರಶ್ನಿಸುವ ಮೂಲಕ ಅವರು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿವಾದದ ಹಿನ್ನೆಲೆ ಏನು ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಉತ್ಪನ್ನಗಳ ಮೇಲೆ ಶೇ. 50 ರಷ್ಟು ಸುಂಕ (Tariff) ವಿಧಿಸಿರುವ ಬಗ್ಗೆ ಮಾತನಾಡುತ್ತಿದ್ದ ಚೌಹಾಣ್, ಅಮೆರಿಕದ ಇಂತಹ ಕಠಿಣ ಧೋರಣೆಗಳು ಭಾರತದ ವ್ಯಾಪಾರದ ಮೇಲೆ ಮಾರಕ ಪೆಟ್ಟು ನೀಡಲಿವೆ ಎಂದರು. ಇದೇ ವೇಳೆ ವೆನಿಜುವೆಲಾದಲ್ಲಿ ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಸ್ತಾಪಿಸಿದ ಅವರು, ಮುಂದಿನ ದಿನಗಳಲ್ಲಿ ಭಾರತದಲ್ಲೂ ವೆನಿಜುವೆಲಾದಂತಹ ಸ್ಥಿತಿ ಬರಬಹುದೇ ? ಟ್ರಂಪ್ ನಮ್ಮ ಪ್ರಧಾನಿಯನ್ನೂ ಅಪಹರಿಸಬಹುದೇ ? ಎಂಬ ಆಘಾತಕಾರಿ ಪ್ರಶ್ನೆಯನ್ನು ಕೇಳಿದ್ದಾರೆ.
ಚೌಹಾಣ್ ಅವರ ಈ ಹೇಳಿಕೆಯನ್ನು ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದೆ. ಇದು ಕೇವಲ ಪ್ರಧಾನಿ ಮೋದಿಯವರಿಗೆ ಮಾಡಿದ ಅಪಮಾನವಲ್ಲ, ಇಡೀ ದೇಶದ ಸಾರ್ವಭೌಮತೆಗೆ ಮಾಡಿದ ಅವಮಾನ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಮೆದುಳು ಸತ್ತುಹೋಗಿದೆ, ಇವರು ಅಜ್ಞಾನಿಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಬೆಂಬಲಿಗರು ಲೇವಡಿ ಮಾಡುತ್ತಿದ್ದಾರೆ. ಭಾರತವು ಪರಮಾಣು ಶಕ್ತಿ ಹೊಂದಿರುವ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ವೆನಿಜುವೆಲಾದಂತಹ ದೇಶಕ್ಕೆ ಹೋಲಿಸುವುದು ಮೂರ್ಖತನ ಎಂದು ಪೃಥ್ವಿರಾಜ್ ಚೌಹಾಣ್ಗೆ ರುಗೇಟು ನೀಡಿದ್ದಾರೆ.
ವೆನಿಜುವೆಲಾದಲ್ಲಿ ಏನಾಗುತ್ತಿದೆ ?
ಮತ್ತೊಂದೆಡೆ, ಅಮೆರಿಕದ ವಶದಲ್ಲಿರುವ ನಿಕೋಲಸ್ ಮಡುರೋ ಅವರು ನ್ಯೂಯಾರ್ಕ್ ನ್ಯಾಯಾಲಯದಲ್ಲಿ ತಮ್ಮ ಮೇಲಿನ ಮಾದಕ ವಸ್ತು ಕಳ್ಳಸಾಗಣೆ ಆರೋಪಗಳನ್ನು ನಿರಾಕರಿಸಿದ್ದಾರೆ. ನನ್ನನ್ನು ನನ್ನ ದೇಶದಲ್ಲೇ ಅಪಹರಿಸಲಾಗಿದೆ, ನಾನು ಈಗಲೂ ವೆನಿಜುವೆಲಾದ ಅಧ್ಯಕ್ಷ ಎಂದು ಮಡುರೋ ಹೇಳಿದ್ದಾರೆ. ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಕೂಡ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 17ಕ್ಕೆ ನಿಗದಿಯಾಗಿದ್ದು, ಈ ಪ್ರಕರಣದ ಅಂತಿಮ ತೀರ್ಪೇನು ಎಂದು ಕಾದು ನೋಡಬೇಕಿದೆ.





