ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಆನ್‌ಲೈನ್ ವಶೀಕರಣ ಜಾಹೀರಾತುಗಳು ಹೇಗೆ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ಹಣ ದೋಚುತ್ತಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಸಿದ ಯುವಕ ಸಿಗುವಂತೆ ಮಾಡುತ್ತೇವೆ, ಮದುವೆ ಖಚಿತ ಎಂದು ನಂಬಿಸಿ ಯುವತಿಯೊಬ್ಬಳಿಂದ ಹಂತ ಹಂತವಾಗಿ ಲಕ್ಷಾಂತರ ಹಣ ವಸೂಲಿ ಮಾಡಿದ ಪ್ರಕರಣ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರೀತಿಯಲ್ಲಿ ನೊಂದಿದ್ದ ಯುವತಿಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ವಶೀಕರಣ ಜಾಹೀರಾತಿಗೆ ಮಾರುಹೋಗಿದ್ದಾಳೆ. “ಕಷ್ಟಕ್ಕೆ ಪರಿಹಾರ”, “ಪ್ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ”, “ಮದುವೆ ಖಚಿತ” ಎಂಬ ಜಾಹೀರಾತು ಆಕೆಯ ಗಮನ ಸೆಳೆದಿತ್ತು. ಜಾಹೀರಾತಿನಲ್ಲಿ ನೀಡಿದ್ದ ಫೋನ್ ಸಂಖ್ಯೆಗೆ (9741336337) ಕರೆ ಮಾಡಿದ ಯುವತಿ ತನ್ನ ಸಮಸ್ಯೆಯನ್ನು ವಿವರಿಸಿದ್ದಾಳೆ.
ಈ ವೇಳೆ ತಮ್ಮನ್ನು ‘ಚಂದ್ರಶೇಖರ್ ಸುಗತ್ ಗುರೂಜಿ’ ಎಂದು ಪರಿಚಯಿಸಿಕೊಂಡ ವ್ಯಕ್ತಿ ಮಾತನಾಡಿದ್ದು, ಯುವತಿಯ ಪ್ರೀತಿಸಿದ ಯುವಕನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾನೆ. ಯುವತಿ “ನಾನು ಪ್ರೀತಿಸಿದ ವ್ಯಕ್ತಿ ನನಗೆ ಸಿಗುತ್ತಾನಾ? ಮದುವೆ ಆಗುತ್ತಾ?” ಎಂದು ಪ್ರಶ್ನಿಸಿದಾಗ, ಗುರೂಜಿ “ಖಂಡಿತ ಸಿಗುತ್ತಾನೆ, ಮದುವೆಯೂ ಆಗುತ್ತದೆ. ಆದರೆ ಸ್ವಲ್ಪ ಹಣ ಖರ್ಚಾಗುತ್ತದೆ” ಎಂದು ಭರವಸೆ ನೀಡಿದ್ದಾನೆ.
ಮೊದಲಿಗೆ ಸಣ್ಣ ಮೊತ್ತದ ಹಣ ಕೇಳಿ ನಂಬಿಕೆ ಗಳಿಸಿದ ಆರೋಪಿ, ನಂತರ ಹಂತ ಹಂತವಾಗಿ ಹಣ ವರ್ಗಾಯಿಸಲು ಯುವತಿಗೆ ಒತ್ತಡ ಹಾಕಿದ್ದಾರೆ. ಆನ್‌ಲೈನ್ ಮೂಲಕ ವಿವಿಧ ಕಾರಣಗಳನ್ನು ಹೇಳಿ ಸುಮಾರು 2.05 ಲಕ್ಷ ರೂಪಾಯಿ ಹಣವನ್ನು ಯುವತಿಯಿಂದ ಪಡೆದುಕೊಂಡಿದ್ದಾರೆ. ಪ್ರತಿ ಬಾರಿ ಹೊಸ ಪೂಜೆ, ಹೊಸ ವಶೀಕರಣ ಎಂಬ ನೆಪ ಹೇಳಿ ಹಣ ಕೇಳಲಾಗಿದೆ.
ಆದರೆ ಕೆಲ ದಿನಗಳ ಬಳಿಕ ಏಕಾಏಕಿ 4 ಲಕ್ಷ ರೂಪಾಯಿ ಹಣ ಕೇಳಿದಾಗ ಯುವತಿಗೆ ಅನುಮಾನ ಶುರುವಾಗಿದೆ. ತಾನು ಮೋಸ ಹೋಗುತ್ತಿದ್ದೇನೆಂದು ಅರಿತ ಯುವತಿ ಗುರೂಜಿಗೆ ಪ್ರಶ್ನೆ ಮಾಡಿದ್ದು, ಇದುವರೆಗೂ ನೀಡಿದ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಾಳೆ. ಆದರೆ ಆರೋಪಿಗಳು ಹಣ ನೀಡಲು ನಿರಾಕರಿಸಿದ್ದು, “ಏನು ಮಾಡ್ತಿಯೋ ಮಾಡಿಕೋ” ಎಂದು ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಆತಂಕಗೊಂಡ ಯುವತಿ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‘ಕೃಷ್ಣಮೂರ್ತಿ ಗುರೂಜಿ’ ಎಂಬ ಹೆಸರಿನ ಸೋಷಿಯಲ್ ಮೀಡಿಯಾ ಖಾತೆ ಹಾಗೂ ಸಂಪರ್ಕ ಸಂಖ್ಯೆಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.





