ಬಿಗ್ ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸಿಕೊಳ್ಳುತ್ತಿದ್ದು, ಹೊಸ ವರ್ಷದ ವಿಶೇಷ ಟಾಸ್ಕ್ ಮನೆಯೊಳಗಿನ ವಾತಾವರಣವನ್ನೇ ಬದಲಿಸಿತ್ತು. ಈ ಟಾಸ್ಕ್‌ನಲ್ಲಿ ತಮ್ಮ ಕ್ರಿಯೇಟಿವಿಟಿ ಮತ್ತು ಕಲಾತ್ಮಕತೆಯನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದವರು ಅಂದ್ರೆ ಗಿಲ್ಲಿ ನಟ. ಆನ್ ಸ್ಪಾಟ್‌ನಲ್ಲಿ ಹಾಡು ಬರೆಯುವುದು, ಡೈಲಾಗ್ ಹೇಳುವುದು ಇವರಿಗೆ ಎಷ್ಟು ಸುಲಭ ಅನ್ನೋದು ಮತ್ತೆ ಸಾಬೀತಾಗಿದೆ.
ಹೊಸ ವರ್ಷದ ಸಂಭ್ರಮದ ಭಾಗವಾಗಿ ಬಿಗ್ ಬಾಸ್ ಮನೆ ಸದಸ್ಯರಿಗೆ ಸ್ಥಳದಲ್ಲೇ ಒಂದು ಹಾಡು ರಚಿಸಿ ಅದನ್ನು ಹಾಡುವ ಚಾಲೆಂಜ್ ನೀಡಲಾಗಿತ್ತು. ಈ ಟಾಸ್ಕ್ ಕೇಳುತ್ತಿದ್ದಂತೆಯೇ ಮನೆಯೊಳಗೆ ಕೆಲವರಿಗೆ ಟೆನ್ಷನ್ ಶುರುವಾದರೆ, ಗಿಲ್ಲಿ ನಟ ಮಾತ್ರ ಅದನ್ನೇ ಒಂದು ಅವಕಾಶವಾಗಿ ತೆಗೆದುಕೊಂಡರು. ಮನೆಯಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಯ ಗುಣಲಕ್ಷಣಗಳನ್ನು ಆಧರಿಸಿ ರಚಿಸಿದ ಅವರ ರ್ಯಾಪ್ ಸಾಂಗ್ ಎಲ್ಲರ ಮನಸ್ಸು ಗೆದ್ದಿತು.
ರ್ಯಾಪ್‌ನಲ್ಲಿ ಮನೆ ಕಥೆ
ಗಿಲ್ಲಿ ನಟ ಬರೆದ ಹಾಡು ಕೇವಲ ರ್ಯಾಪ್ ಮಾತ್ರವಲ್ಲ, ಅದು ಬಿಗ್ ಬಾಸ್ ಮನೆಯ ಜೀವನದ ಪ್ರತಿಬಿಂಬ. ನಾಮಿನೇಷನ್‌ನ ಒತ್ತಡ, ಲಕ್ಸುರಿ ಬಜೆಟ್‌ನ ಲೆಕ್ಕಾಚಾರ, ಟಾಸ್ಕ್ ಗೆದ್ದರೆ ಕ್ಯಾಪ್ಟನ್, ಸೋತರೆ ಟೆನ್ಷನ್ ಎಲ್ಲವನ್ನೂ ಹಾಸ್ಯದ ಜೊತೆಗೆ ಹಾಡಿನಲ್ಲಿ ಅಚ್ಚುಕಟ್ಟಾಗಿ ಮೂಡಿಸಿದ್ದಾರೆ. ‘ಇಲ್ಲಿದ್ರೆ ಆನಂದ, ಮನೆಗೆ ಹೋದ್ರೆ ಗೋವಿಂದ, ನಾವು ಉಳಿದಿರೋದೇ ಜನರಿಂದ’ ಎಂಬ ಸಾಲುಗಳು ವೀಕ್ಷಕರ ಮನ ಗೆದ್ದಿದೆ.
ಕಿಚ್ಚನಿಗೂ ವಿಶೇಷ ಗೌರವ
ವೀಕೆಂಡ್ ಎಪಿಸೋಡ್ ಅಂದ್ರೆ ಕಿಚ್ಚ ಸುದೀಪ್ ಅನ್ನೋದು ಪ್ರತಿಯೊಬ್ಬ ಸ್ಪರ್ಧಿಗೂ ಗೊತ್ತು. ಅದನ್ನೂ ಗಿಲ್ಲಿ ನಟ ತಮ್ಮ ಹಾಡಿನಲ್ಲಿ ಮಿಸ್ ಮಾಡಿಲ್ಲ. ಸುದೀಪ್ ಅವರ ಸ್ಟೈಲ್, ಅವರ ಚಪ್ಪಾಳೆ, ವಿನ್ನರ್ ಆಯ್ಕೆ ಮಾಡುವ ಕ್ಷಣ ಇವೆಲ್ಲವನ್ನೂ ಹಾಡಿನಲ್ಲಿ ಸೊಗಸಾಗಿ ಸೇರಿಸಿ, ಕಿಚ್ಚನಿಗೆ ಅಭಿಮಾನಿ ಗೌರವ ಸಲ್ಲಿಸಿದ್ದಾರೆ.
ಸ್ಪರ್ಧಿಗಳಿಗೆ ಸಿಹಿ ಟಚ್
ರಘು ಅಣ್ಣನ ಸರಳತೆ, ರವಿ ಅವರ ಪಾಸಿಟಿವಿಟಿ, ಧನುಷ್ ಅವರ ಮಗುವಂತ ಮನಸ್ಸು, ರಕ್ಷಿತಾ ಅವರ ಧ್ವನಿ, ಸ್ಪಂದನಾ ಅವರ ಎಲಿಗೆನ್ಸ್, ರಾಶಿಕಾ ಅವರ ಸ್ಟೈಲ್, ಧ್ರುವಂತ್ ಅವರ ಭಕ್ತಿ, ಅಶ್ವಿನಿ ಅವರ ಕುಕಿಂಗ್ ಪ್ರತಿಯೊಬ್ಬರ ವೈಶಿಷ್ಟ್ಯವನ್ನೂ ಒಂದೇ ಹಾಡಿನಲ್ಲಿ ತಂದು ನಿಲ್ಲಿಸಿದ್ದಾರೆ. ಯಾರನ್ನೂ ನೋಯಿಸದೆ, ಹಾಸ್ಯದೊಂದಿಗೆ ಎಲ್ಲರ ಗುಣಗಳನ್ನು ಹಾಡಿನಲ್ಲಿ ಕಟ್ಟಿಕೊಟ್ಟಿರುವುದು ಗಿಲ್ಲಿ ನಟನ ದೊಡ್ಡ ಗೆಲುವು.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್
ಈ ರ್ಯಾಪ್ ಸಾಂಗ್ ಪ್ರಸಾರವಾದ ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಗಿಲ್ಲಿ ನಟನ ಕ್ರಿಯೇಟಿವಿಟಿಗೆ ಫುಲ್ ಕ್ಲಾಪ್ಸ್ ಕೊಡುತ್ತಿದ್ದಾರೆ. “ಇವ್ರು ಬರಹಗಾರ, ಗಾಯಕ, ಎಂಟರ್ಟೈನರ್ ಎಲ್ಲಾ ಒಂದೇ ಪ್ಯಾಕೇಜ್” ಎಂದು ಕಾಮೆಂಟ್ ಮಾಡುತ್ತಿದ್ದಾರೆ.





