ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷದ ಸಂಭ್ರಮಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಶಾಂತಿ, ಸುರಕ್ಷತೆ ಹಾಗೂ ಸಾರ್ವಜನಿಕ ಶಿಸ್ತು ಕಾಪಾಡುವ ಉದ್ದೇಶದಿಂದ ಬೆಂಗಳೂರು ಪೊಲೀಸರು ಸಮಗ್ರ ಭದ್ರತಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಡಿಸೆಂಬರ್ 31ರಂದು ನಗರದಲ್ಲಿ ಸುಮಾರು 20,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಪ್ರಮುಖ ಸಂಭ್ರಮ ಸ್ಥಳಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಈ ಪ್ರದೇಶಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ರಸ್ತೆ ಸಂಚಾರಕ್ಕೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ನಗರದಾದ್ಯಂತ 6,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಮೂಲಕ ನಿರಂತರ ಕಣ್ಗಾವಲು ನಡೆಸಲಾಗುತ್ತಿದೆ. ಅಲ್ಲದೆ, ಪ್ರಮುಖ ರಸ್ತೆ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ವಾಚ್‌ಟವರ್‌ಗಳನ್ನು ನಿರ್ಮಿಸಿ ಮೇಲ್ದರ್ಜೆಯ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇದರಿಂದ ಯಾವುದೇ ಅನುಮಾನಸ್ಪದ ಚಟುವಟಿಕೆಗಳನ್ನೂ ಕೂಡ ತಕ್ಷಣ ಪತ್ತೆಹಚ್ಚಲು ಸಾಧ್ಯವಾಗಲಿದೆ.
ಹೀಟ್ ಮ್ಯಾಪ್ ತಂತ್ರಜ್ಞಾನ
ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೀಟ್ ಮ್ಯಾಪ್ ವ್ಯವಸ್ಥೆ ಅಳವಡಿಸಲಾಗಿದೆ. ಇದು ಕಲರ್ ಕೋಡೆಡ್ ವಿಶ್ಯುಯಲ್ ತಂತ್ರಜ್ಞಾನವಾಗಿದ್ದು, ಹೆಚ್ಚು ಚಟುವಟಿಕೆ ನಡೆಯುವ ಪ್ರದೇಶಗಳನ್ನು ಗುರುತಿಸಲು ಪೊಲೀಸರಿಗೆ ನೆರವಾಗುತ್ತದೆ. ಅಪಾಯದ ಮಟ್ಟ ಹೆಚ್ಚಿರುವ ವಲಯಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲು ಈ ವ್ಯವಸ್ಥೆ ಸಹಾಯಕವಾಗಲಿದೆ.
ಕುಡಿದು ಚಾಲನೆಗೆ ಕಡಿವಾಣ
ಹೊಸ ವರ್ಷಾಚರಣೆಯ ವೇಳೆ ಕುಡಿದು ವಾಹನ ಚಲಾಯಿಸುವುದನ್ನು ತಡೆಯಲು 66 ಡ್ರಿಂಕ್ ಅಂಡ್ ಡ್ರೈವ್ ಚೆಕ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ, ಅಪಾಯಕಾರಿ ಸ್ಟಂಟ್ ಹಾಗೂ ವೀಲಿಂಗ್ ತಡೆಯಲು 92 ವೀಲಿಂಗ್ ಸ್ಪಾಟ್‌ಗಳನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಹಿಳಾ ಸುರಕ್ಷೆಗೆ ಚೆನ್ನಮ್ಮ ಪಡೆ
ಮಹಿಳೆಯರ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದ್ದು, ಚೆನ್ನಮ್ಮ ಪಡೆ, ಕ್ಯೂಆರ್‌ಟಿ (ಕ್ವಿಕ್ ರೆಸ್ಪಾನ್ಸ್ ಟೀಮ್) ಸೇರಿದಂತೆ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಲೇಡಿ ಡಿಸಿಪಿ ಹುದ್ದೆಯ ಅಧಿಕಾರಿಗಳು ಸಹ ಕರ್ತವ್ಯದಲ್ಲಿರುತ್ತಾರೆ.
ನಗರದ ವಿವಿಧ ಭಾಗಗಳಲ್ಲಿ ವುಮೆನ್ ಬೌನ್ಸರ್‌ಗಳ ನಿಯೋಜನೆ, ಅಸ್ವಸ್ಥ ಮಹಿಳೆಯರ ಸಹಾಯಕ್ಕಾಗಿ ಸೇಫ್ಟಿ ಐಲ್ಯಾಂಡ್‌ಗಳು ಹಾಗೂ ವುಮೆನ್ ಶೆಲ್ಟರ್‌ಗಳ ಸ್ಥಾಪನೆ ಮಾಡಲಾಗಿದೆ. ಇಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿ ಸಿದ್ಧವಾಗಿರುತ್ತಾರೆ. 112 ತುರ್ತು ಸೇವೆಗೆ ಕರೆ ಬಂದ ತಕ್ಷಣ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಜಂಟಿ ತಪಾಸಣೆ ಮತ್ತು ಪ್ರವಾಸಿ ತಾಣಗಳಿಗೆ ನಿರ್ಬಂಧ
ಅಗ್ನಿಶಾಮಕ ದಳ ಮತ್ತು ಅಬಕಾರಿ ಇಲಾಖೆಗಳೊಂದಿಗೆ ಜಂಟಿ ತಪಾಸಣೆ ನಡೆಸಲಾಗಿದ್ದು, ಅಗ್ನಿ ಅಪಘಾತ ಹಾಗೂ ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಶ್ರೀರಾಮದೇವರ ಬೆಟ್ಟ, ಸಂಗಮ, ಮೇಕೆದಾಟು ಮತ್ತು ಚುಂಚಿ ಫಾಲ್ಸ್ ಪ್ರವಾಸಿ ತಾಣಗಳಿಗೆ ಡಿಸೆಂಬರ್ 31 ಸಂಜೆ 6ರಿಂದ ಜನವರಿ 1 ಬೆಳಗ್ಗೆ 6ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಪೊಲೀಸರ ಸಂದೇಶ
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಭದ್ರತಾ ವ್ಯವಸ್ಥೆ ಪರಿಶೀಲಿಸಿ, ಜನರು ಶಿಸ್ತುಬದ್ಧವಾಗಿ ಸಂಭ್ರಮ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡಲು ಅವಕಾಶ ಇರುವುದಿಲ್ಲ; ಹೋಟೆಲ್, ಪಬ್, ರೆಸ್ಟೋರೆಂಟ್‌ಗಳಂತಹ ನಿರ್ದಿಷ್ಟ ಸ್ಥಳಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂದಿದ್ದಾರೆ.





