ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ವಂಚಿಸಿದ ವ್ಯಕ್ತಿಯೊಬ್ಬ, ಆಕೆಯ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರ ಎಸಗಿರುವ ಶಾಕಿಂಗ್ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶುಭಾಂಶು ಶುಕ್ಲಾ (27) ಎಂದು ಗುರುತಿಸಲಾಗಿದೆ. ಆರೋಪಿ ಮೊದಲಿಗೆ ಸಂತ್ರಸ್ತ ಯುವತಿಯ ಅಪ್ರಾಪ್ತ ಸಹೋದರಿಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ. ಆ ಪರಿಚಯದ ಮೂಲಕ ಕುಟುಂಬಕ್ಕೂ ಹತ್ತಿರವಾಗಿದ್ದ ಆತ, ವಿಶ್ವಾಸ ಗಳಿಸಿ ಮನೆಮಂದಿಯ ಒಪ್ಪಿಗೆ ಪಡೆದುಕೊಂಡಿದ್ದಾನೆ.
ನಂತರ, “ಹಿರಿಯ ಸಹೋದರಿಗೆ ಮುಂಬೈನಲ್ಲಿ ಉದ್ಯೋಗ ಸಿಕ್ಕಿದೆ” ಎಂದು ಹೇಳಿ, ಸಂತ್ರಸ್ತ ಯುವತಿ ಹಾಗೂ ಆಕೆಯ ಕುಟುಂಬವನ್ನು ನಂಬಿಸಿ ಮುಂಬೈಗೆ ಕರೆದುಕೊಂಡು ಹೋಗಿದ್ದಾನೆ. ಮುಂಬೈನಲ್ಲಿ ಖಾಸಗಿ ಫ್ಲ್ಯಾಟ್‌ನಲ್ಲಿ ಇಬ್ಬರೂ ಲಿವಿನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು.
ಕೆಲವೇ ದಿನಗಳಲ್ಲಿ, ಶುಭಾಂಶುಗೆ ಈಗಾಗಲೇ ಮದುವೆಯಾಗಿದೆ ಎಂಬ ಸತ್ಯ ಸಂತ್ರಸ್ತೆಗೆ ಗೊತ್ತಾಗಿದೆ. ಈ ವಿಚಾರವನ್ನು ಪ್ರಶ್ನಿಸಿದಾಗ, “ನಾನು ನನ್ನ ಪತ್ನಿಯಿಂದ ವಿಚ್ಛೇದನ ಪಡೆಯುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆ” ಎಂದು ಹೇಳಿ ನಂಬಿಸಿದ್ದಾನೆ. ಆರೋಪಿ ಪತ್ನಿಯೂ ಸಹ ಸಂತ್ರಸ್ತ ಯುವತಿಯೊಂದಿಗೆ ಮಾತನಾಡಿ, ತಾನು ಶುಭಾಂಶುಗೆ ಡಿವೋರ್ಸ್ ನೀಡುವುದಾಗಿ ಹೇಳಿದ್ದಾಳೆ. ಇದರಿಂದ ನಂಬಿಕೆ ಇಟ್ಟುಕೊಂಡ ಸಂತ್ರಸ್ತೆ ಸಂಬಂಧವನ್ನು ಮುಂದುವರಿಸಿದ್ದಳು.
ಬಳಿಕ ಶುಭಾಂಶು ಇದೇ ರೀತಿಯ ವಂಚನೆಯನ್ನು ಮತ್ತೊಬ್ಬ ಅಪ್ರಾಪ್ತ ಯುವತಿಯ ಮೇಲೂ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಚಾರ ಹೊರಬಿದ್ದ ನಂತರ ಆರೋಪಿ, ಸಂತ್ರಸ್ತೆಯ ಮೇಲೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದಾನೆ ಎಂದು ದೂರಲಾಗಿದೆ.
ಆರೋಪಿ ಸಂತ್ರಸ್ತ ಯುವತಿಯ ಬಳಿ ಸುಮಾರು ₹37 ಲಕ್ಷ ನಗದು ಪಡೆದುಕೊಂಡಿದ್ದು, ಆಕೆಯ ಮನೆಯಿಂದ 559 ಗ್ರಾಂ ಚಿನ್ನಾಭರಣ ಕದ್ದಿರುವ ಆರೋಪವೂ ಇದೆ. ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ.
ನಿರಂತರ ಹಿಂಸೆ ಮತ್ತು ಬೆದರಿಕೆ ತಾಳಲಾರದೆ, ಸಂತ್ರಸ್ತೆ ಕೊನೆಗೆ ಆರೋಪಿಯನ್ನು ಬಿಟ್ಟು ಮನೆಗೆ ವಾಪಾಸ್ ಆಗಿದ್ದಾಳೆ.. ಸಂತ್ರಸ್ತೆಯ ಪರಿಚಯಕ್ಕೆ ಮೂಲ ಕಾರಣವಾಗಿದ್ದ ಆಕೆಯ ಅಪ್ರಾಪ್ತ ಸಹೋದರಿಯ ಮೇಲೂ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಹೊರಬಿದ್ದಿದೆ.
ಅಪ್ರಾಪ್ತ ಬಾಲಕಿ ನೀಡಿದ ದೂರಿನಲ್ಲಿ, “ಗ್ರೂಪ್ ಸ್ಟಡಿ ನೆಪದಲ್ಲಿ ಪರಿಚಯ ಮಾಡಿಕೊಂಡ ಶುಭಾಂಶು, ಹಲವು ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಕರೆದಾಗೆಲ್ಲ ಬರಬೇಕು ಎಂದು ಬೆದರಿಸಿದ್ದ. ನನ್ನ ಮನೆಯವರನ್ನು ಪರಿಚಯ ಮಾಡಿಸು, ಹಾಗಾದರೆ ಮಾತ್ರ ನಿನ್ನನ್ನು ಬಿಡುತ್ತೇನೆ ಎಂದು ಹೆದರಿಸಿದ್ದ” ಎಂದು ಹೇಳಿದ್ದಾಳೆ.
ಬಾಗಲಗುಂಟೆ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ, ವಂಚನೆ, ಅತ್ಯಾಚಾರ, ಬೆದರಿಕೆ, ಹಣ ದೋಚಿಕೆ ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.





