ಬೆಂಗಳೂರು: ಕ್ರಿಸ್‌ಮಸ್ ಸಂಭ್ರಮಕ್ಕೆ ತೆರೆ ಬಿದ್ದಿದ್ದು, ಇದೀಗ ವರ್ಷಾಂತ್ಯದ ಕೊನೆಯ ಕ್ಷಣಗಳು ಹತ್ತಿರವಾಗ್ತಿದೆ. 2025ಕ್ಕೆ ವಿದಾಯ ಹೇಳಿ 2026ರ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಲು ಜನತೆ ಸಿದ್ಧವಾಗಿದ್ದು, ಅದರ ಪರಿಣಾಮವಾಗಿ ಕರ್ನಾಟಕದ ಪ್ರವಾಸಿ ತಾಣಗಳೆಲ್ಲಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿವೆ. ನ್ಯೂ ಇಯರ್ ಆಚರಣೆಗೆ ಪ್ರವಾಸಿಗರು ರಾಜ್ಯದ ವಿವಿಧ ಪ್ರವಾಸಿ ತಾಣಗಳತ್ತ ಲಗ್ಗೆ ಹಾಕ್ತಿದ್ದಾರೆ.
ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ರಜೆಯ ಹಿನ್ನೆಲೆ, ನಗರದ ಜನರು ಪ್ರಕೃತಿಯ ಮಡಿಲಿಗೆ ತೆರಳುತ್ತಿದ್ದಾರೆ. ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಹಾಗೂ ಹೋಟೆಲ್‌ಗಳು ಬಹುತೇಕ ಸಂಪೂರ್ಣವಾಗಿ ಬುಕ್ ಆಗಿವೆ. ಕೆಲವೆಡೆ ನ್ಯೂ ಇಯರ್ ಸಮಯದ ವಿಶೇಷ ಪ್ಯಾಕೇಜ್‌ಗಳ ಹೆಸರಿನಲ್ಲಿ ದರಗಳು ಗಗನಕ್ಕೇರಿದ್ದು, ಪ್ರವಾಸಿಗರ ಜೇಬಿಗೆ ದೊಡ್ಡ ಹೊರೆ ಆಗಿದೆ.
ಕಾಫಿನಾಡು ಚಿಕ್ಕಮಗಳೂರು, ಕೊಡಗು ಭಾಗಗಳಲ್ಲಿ ಪ್ರವಾಸಿಗರ ದಂಡೇ ಹರಿದಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಸೀತಾಳಯ್ಯನಗಿರಿ, ಶೃಂಗೇರಿ, ಹೊರನಾಡು, ಕುದುರೆಮುಖ ಸೇರಿದಂತೆ ಪ್ರಮುಖ ಗಿರಿಶಿಖರಗಳು ಹೊಸ ವರ್ಷದ ರಾತ್ರಿಗಾಗಿ ಸಜ್ಜಾಗಿವೆ. ಈ ವರ್ಷ ಮಹಾಮಳೆಯ ನಡುವೆಯೂ ಕಾಫಿನಾಡಿಗೆ ಭಾರೀ ಡಿಮ್ಯಾಂಡ್ ಕಂಡುಬಂದಿದೆ. ಮಂಜು ಮುಸುಕಿದ ವಾತಾವರಣ, ಹಸಿರು ಹೊಲಗಳು, ಜಲಪಾತಗಳ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತಿದೆ.
ಮಲೆನಾಡು ಭಾಗದಲ್ಲಿ ಪ್ರವಾಸಿಗರ ಸಂಖ್ಯೆಯು ಹೆಚ್ಚಿರುವುದರಿಂದ ವಾಹನ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕೆಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಇದರ ನಡುವೆ, ಕೆಲ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಡಿಜೆ ಪಾರ್ಟಿ, ಫೈರ್ ಕ್ಯಾಂಪ್, ನ್ಯೂ ಇಯರ್ ಸೆಲೆಬ್ರೇಷನ್ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರ ಜಾತ್ರೆಯೇ ನಡೆಯುತ್ತಿದೆ. ವಿಶೇಷವಾಗಿ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ದೋಣಿ ವಿಹಾರ ಮಾಡಿ ಮೊಸಳೆ, ವಿವಿಧ ಪಕ್ಷಿ ಸಂಕುಲಗಳನ್ನು ವೀಕ್ಷಣೆ ಮಾಡುವಲ್ಲಿ ಪ್ರವಾಸಿಗರು ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ.
ಇನ್ನು ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಭಕ್ತರ ಮಹಾಪೂರವೇ ಹರಿದಿದೆ. ಲಕ್ಷಾಂತರ ಭಕ್ತರು ಅಂಜನಾದ್ರಿಗೆ ಆಗಮಿಸಿದ್ದು, ಬೆಟ್ಟ ಪ್ರದೇಶ ಸಂಪೂರ್ಣ ಜಾಮ್ ಆಗಿದೆ. ಆಂಜನೇಯನ ದರ್ಶನ ಪಡೆಯಲು ಭಕ್ತರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಭಾರೀ ಜನಸಂದಣಿ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಣ ಹಾಗೂ ಭದ್ರತಾ ವ್ಯವಸ್ಥೆಗೆ ಪೊಲೀಸರು ಹೆಚ್ಚಿನ ಗಮನ ಹರಿಸಿದ್ದಾರೆ.
ಹೊಸ ವರ್ಷದ ಸಂಭ್ರಮ ಕರ್ನಾಟಕದಾದ್ಯಂತ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬಿದೆ. ಪ್ರಕೃತಿ ಸೌಂದರ್ಯ, ಧಾರ್ಮಿಕ ಸ್ಥಳಗಳು ಮತ್ತು ಸಾಹಸ ಪ್ರವಾಸಗಳು ಜನರನ್ನು ಸೆಳೆಯುತ್ತಿವೆ.





