ಬೆಂಗಳೂರು: 2025ಕ್ಕೆ ವಿದಾಯ ಹೇಳಿ 2026ನ್ನು ಸ್ವಾಗತಿಸುವ ಕ್ಷಣಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದೆ. ಹೊಸ ವರ್ಷಾಚರಣೆಯ ಸಂಭ್ರಮ ನಗರದೆಲ್ಲೆಡೆ ಜೋರಾಗುತ್ತಿರುವ ಹಿನ್ನೆಲೆ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಬೆಂಗಳೂರು ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಇದರಿಂದಾಗಿ ಡಿಸೆಂಬರ್ 31ರ ಸಂಜೆಯಿಂದಲೇ ನಗರಾದ್ಯಂತ ಖಾಕಿ ಪಡೆ ಹೈ ಅಲರ್ಟ್ ಆಗಿದ್ದಾರೆ.
ಹೊಸ ವರ್ಷದ ಸಂಭ್ರಮದಲ್ಲಿ ಲಕ್ಷಾಂತರ ಜನರು ರಸ್ತೆಗೆ ಇಳಿಯುವ ನಿರೀಕ್ಷೆ ಇರುವುದರಿಂದ, ಸಾರ್ವಜನಿಕರ ಸುರಕ್ಷತೆ, ಸಂಚಾರ ನಿಯಂತ್ರಣ ಹಾಗೂ ಮಹಿಳೆಯರ ರಕ್ಷಣೆಗೆ ಪೊಲೀಸರು ವಿಶೇಷ ಯೋಜನೆ ರೂಪಿಸಿದ್ದಾರೆ. ನಗರದ ಪ್ರಮುಖ ಜಂಕ್ಷನ್‌ಗಳು, ವಾಣಿಜ್ಯ ಪ್ರದೇಶಗಳು, ಐಟಿ-ಬಿಟಿ ಹಬ್‌ಗಳು, ಬಾರ್-ರೆಸ್ಟೋರೆಂಟ್ ಪ್ರದೇಶಗಳು ಮತ್ತು ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸ್ವತಃ ನಗರದಲ್ಲಿ ರೌಂಡ್ಸ್ ನಡೆಸಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ನ್ಯೂ ಇಯರ್ ವೇಳೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ಕೂಡ ನಡೆಸಲಾಗಿದೆ. ಈ ಸಭೆಯಲ್ಲಿ ಸಂಚಾರ ನಿರ್ಬಂಧ, ಫ್ಲೈಓವರ್‌ಗಳ ಓಪನ್ ಅಥವಾ ಕ್ಲೋಸ್ ನಿರ್ಧಾರ, ಜನಸಂದಣಿ ನಿಯಂತ್ರಣ ಹಾಗೂ ತುರ್ತು ಸೇವೆಗಳ ಸಂಯೋಜನೆ ಕುರಿತು ಚರ್ಚೆ ನಡೆದಿದೆ.
ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಹೈ ಅಲರ್ಟ್
ಐಟಿ-ಬಿಟಿ ಉದ್ಯೋಗಿಗಳು ಹೆಚ್ಚಿರುವ ಎಲೆಕ್ಟ್ರಾನಿಕ್ಸ್ ಸಿಟಿ ಪ್ರದೇಶದಲ್ಲಿ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಡಿಸಿಪಿ ಎಂ. ನಾರಾಯಣ್ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಮೆಟ್ರೋ ರೈಲು ಸಂಪರ್ಕ ಮಾರ್ಗಗಳು ಹಾಗೂ ಪಾದಚಾರಿಗಳ ಸಂಚಾರ ಹೆಚ್ಚಿರುವ ಸ್ಥಳಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳ ಜತೆಗೆ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗಿದೆ.
ಮಹಿಳೆಯರ ಸುರಕ್ಷತೆಗೆ ವಿಶೇಷ ಗಮನ
ಹೊಸ ವರ್ಷದ ಸಂಭ್ರಮದಲ್ಲಿ ಮಹಿಳೆಯರ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದೆ. ರಾಣಿ ಚೆನ್ನಮ್ಮ ಪಡೆಯನ್ನು ಪ್ರಮುಖ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಟಿ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಅವರು ಮಾತನಾಡಿ, ಮಹಿಳೆಯರ ರಕ್ಷಣೆಗೆ ವಿಶೇಷ ಪ್ಯಾಟ್ರೋಲಿಂಗ್, ತಕ್ಷಣ ಸ್ಪಂದಿಸುವ ತಂಡಗಳು ಹಾಗೂ ಸಹಾಯವಾಣಿ ವ್ಯವಸ್ಥೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಸಂಚಾರ ನಿಯಂತ್ರಣ ಮತ್ತು ಸಾರ್ವಜನಿಕರಿಗೆ ಮನವಿ
ಡಿಸೆಂಬರ್ 31ರ ರಾತ್ರಿ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಜಾರಿಯಾಗುವ ಸಾಧ್ಯತೆ ಇದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು, ಸಂಭ್ರಮವನ್ನು ಸಂಯಮದಿಂದ ಆಚರಿಸಬೇಕು ಹಾಗೂ ಪೊಲೀಸ್ ಸೂಚನೆಗಳನ್ನು ಪಾಲಿಸಬೇಕು ಎಂದು ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.





