ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಮುಂಭಾಗ ಇತ್ತೀಚೆಗೆ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟದ ತೀವ್ರತೆ ಈಗ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪ್ರವಾಸಿಗರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಫೋಟಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಸಾವಿನಲ್ಲೂ ಜೊತೆಯಾದ ಅಣ್ಣ-ತಂಗಿ:
ನಂಜನಗೂಡಿನ ಚಾಮಲಾಪುರದ ನಿವಾಸಿ ಮಂಜುಳಾ ಅವರು ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ನಿನ್ನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಬಳಿಕ ಅವರ ಅಂತ್ಯಕ್ರಿ ನಡೆಸಲಾಯಿತು. ಈ ಬಗ್ಗೆ ಆಸ್ಪತ್ರೆಯಲ್ಲಿದ್ದ ಮಂಜುಳ ಅಣ್ಣ ಪರಮೇಶ್ವರ್‌ರಿಗೆ ಈ ಸುದ್ದಿ ತಿಳಿಯುತ್ತಿದ್ದಂತೆ ತೀವ್ರ ಆಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾರೆ. ತಂಗಿಯ ಅಗಲಿಕೆಯ ನೋವನ್ನು ತಡೆಯಲಾರದೆ ಅಣ್ಣನೂ ಮೃತಪಟ್ಟಿರುವುದು ಆಘಾತವಾಗಿದೆ.
ಸ್ಫೋಟದಲ್ಲಿ ಗಾಯಗೊಂಡಿದ್ದ ಬೆಂಗಳೂರು ಮೂಲದ ಲಕ್ಷ್ಮಿ ಅವರ ಸ್ಥಿತಿಯೂ ಚಿಂತಾಜನಕವಾಗಿತ್ತು. ಕೆ.ಆರ್. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಮೊದಲೇ ಬಲೂನ್ ವ್ಯಾಪಾರಿ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದನು.
ತನಿಖೆ ತೀವ್ರಗೊಳಿಸಿದ ಪೊಲೀಸರು:
ಈ ಸ್ಫೋಟವು ಕೇವಲ ಒಂದು ಆಕಸ್ಮಿಕವೇ ಅಥವಾ ಇದರ ಹಿಂದೆ ಬೇರೇನಾದರೂ ಸಂಚಿದೆಯೇ ಎಂಬ ಬಗ್ಗೆ ಮೈಸೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಫೋಟದ ಹಿಂದಿರುವ ಕಾರಣಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ:
ಉತ್ತರ ಪ್ರದೇಶ ಮೂಲದ ಸಲೀಂ ಕಳೆದ 15 ದಿನಗಳಿಂದ ಮೈಸೂರಿನ ಲಷ್ಕರ್ ಮೊಹಲ್ಲಾದ ಖಾಸಗಿ ಲಾಡ್ಜ್‌ನಲ್ಲಿ ವಾಸವಿದ್ದನು. ಆತ ಪ್ರತಿನಿತ್ಯ ಅರಮನೆ, ಕೆ.ಆರ್. ವೃತ್ತ, ಮೃಗಾಲಯ ಹಾಗೂ ಜಗನ್ಮೋಹನ ಅರಮನೆಯಂತಹ ಪ್ರಮುಖ ಪ್ರವಾಸಿ ತಾಣಗಳಲ್ಲೇ ಬಲೂನ್ ಮಾರಾಟ ಮಾಡುತ್ತಿದ್ದನು. ಹೊಸ ವರ್ಷದ ಸಂಭ್ರಮಾಚರಣೆಯ ಹೊತ್ತಲ್ಲೇ ಈ ಘಟನೆ ನಡೆದಿರುವುದು ಮತ್ತು ಅರಮನೆ ಮುಂಭಾಗಕ್ಕೆ ಬಂದ ಕೆಲವೇ ನಿಮಿಷಗಳಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವುದು ಪೊಲೀಸರಲ್ಲಿ ಸಂಶಯ ಮೂಡಿಸಿದೆ.
ಬೆಳಗ್ಗೆ ಲಾಡ್ಜ್ ಬಿಟ್ಟು ತಡರಾತ್ರಿ ಹಿಂದಿರುಗುತ್ತಿದ್ದ ಸಲೀಂ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ಲಾಡ್ಜ್ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವಾಸಿಗರ ಭದ್ರತೆಯ ದೃಷ್ಟಿಯಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಫೋರೆನ್ಸಿಕ್ ತಜ್ಞರ ವರದಿಗಾಗಿ ಕಾಯಲಾಗುತ್ತಿದೆ. ಈ ಘಟನೆಯಿಂದ 3 ಮಂದಿ ಸಾವನ್ನಪ್ಪಿದ್ದು, ಈಗ ಮಂಜುಳಾ ಅಣ್ಣ ಕೂಡ ಸಾವನ್ನಪ್ಪಿರುವುದು ತೀವ್ರ ಬೇಸರದ ಸಂಗತಿಯಾಗಿದೆ.





