ಬೆಂಗಳೂರು: ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಏಳು ಮಂದಿ ಸಜೀವ ದಹನಗೊಂಡ ಘಟನೆ ರಾಜ್ಯದ ಜನತೆಯನ್ನು ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ಅವಧಿಯ ಸಂಚಾರದ ಸುರಕ್ಷತೆ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಹೆಚ್ಚಿನ ರಸ್ತೆ ಅಪಘಾತಗಳು ಮಧ್ಯರಾತ್ರಿಯ ನಂತರವೇ ನಡೆಯುತ್ತಿವೆ. ಇದಕ್ಕೆ ಚಾಲಕರು ನಿದ್ರೆ ಮಂಪರಿನಲ್ಲಿ ವಾಹನ ಚಾಲನೆ ಮಾಡುವುದೇ ಪ್ರಮುಖ ಕಾರಣ ಎಂದು ಸಚಿವ ರಾಮಲಿಂಗರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಚಾಲಕರು ನಿದ್ದೆ ಬರುವಾಗ ಬಲವಂತವಾಗಿ ವಾಹನ ಚಾಲನೆ ಮಾಡುವುದರಿಂದ ಅನಾಹುತಗಳು ಸಂಭವಿಸುತ್ತಿವೆ. ಇದನ್ನು ತಡೆಯಲು ರಾತ್ರಿ ಸಮಯದಲ್ಲಿ ಕಡ್ಡಾಯ ವಿಶ್ರಾಂತಿಯ ಅಗತ್ಯವಿದೆ ಎಂದು ಸಚಿವ ತಿಳಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿರುವ ಪತ್ರದಲ್ಲಿ ಸಚಿವರು ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಿದ್ದಾರೆ:
-
ಕಡ್ಡಾಯ ವಿಶ್ರಾಂತಿ: ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಚಾಲಕರು ವಾಹನಗಳನ್ನು ನಿಲ್ಲಿಸಿ ವಿಶ್ರಾಂತಿ ಪಡೆಯುವಂತೆ ಹೊಸ ಮಾರ್ಗಸೂಚಿ (Guidelines) ರೂಪಿಸಬೇಕು.
-
ಹೈವೇ ಬೇಸ್‌ಗಳ ಬಳಕೆ: ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ವಿಶ್ರಾಂತಿ ತಾಣಗಳಲ್ಲಿ (Way-side amenities) ಚಾಲಕರು ಕನಿಷ್ಠ ನಾಲ್ಕು ಗಂಟೆಗಳ ಕಾಲ ನಿದ್ದೆ ಮಾಡಲು ಅವಕಾಶ ಕಲ್ಪಿಸಬೇಕು.
-
ಟ್ರಕ್ ಮತ್ತು ಲಾರಿ ಚಾಲಕರಿಗೆ ಆದ್ಯತೆ: ಬಸ್‌ಗಳಲ್ಲಿ ಸಾಮಾನ್ಯವಾಗಿ ಇಬ್ಬರು ಚಾಲಕರಿರುತ್ತಾರೆ, ಆದರೆ ಟ್ರಕ್ ಮತ್ತು ಲಾರಿಗಳಲ್ಲಿ ಒಬ್ಬರೇ ಚಾಲಕರಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಅಪಘಾತದ ಅಪಾಯ ಹೆಚ್ಚಿರುವುದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ವಿಶೇಷ ಗಮನಹರಿಸಬೇಕು.
ಬ್ಲ್ಯಾಕ್ ಸ್ಪಾಟ್‌ಗಳ ಮೇಲೆ ನಿಗಾ:
ಹಿರಿಯೂರಿನಲ್ಲಿ ಅಪಘಾತ ನಡೆದ ಸ್ಥಳವು ‘ಬ್ಲ್ಯಾಕ್ ಸ್ಪಾಟ್’ ಆಗಿ ಪರಿಣಮಿಸಿದ್ದು, ಅಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಮಾಹಿತಿ ನೀಡಿ, ರಸ್ತೆಯ ವಿನ್ಯಾಸದಲ್ಲಿ ಏನಾದರೂ ದೋಷವಿದೆಯೇ ಅಥವಾ ಸುರಕ್ಷತಾ ಕ್ರಮಗಳ ಕೊರತೆಯಿದೆಯೇ ಎಂಬುದನ್ನು ಪರಿಶೀಲಿಸಲು ಸಚಿವರು ಸೂಚಿಸಿದ್ದಾರೆ.
ಚಾಲಕರಿಗೆ ಕಿವಿಮಾತು:
ರಾತ್ರಿ ಪ್ರಯಾಣ ಮಾಡುವವರು ಸಂಜೆಯೇ ಸರಿಯಾಗಿ ನಿದ್ರೆ ಮಾಡಿ ನಂತರ ಪ್ರಯಾಣ ಆರಂಭಿಸುವುದು ಉತ್ತಮ. ಒಂದು ವೇಳೆ ಚಾಲನೆ ಮಾಡುವಾಗ ನಿದ್ದೆ ಬಂದರೆ, ವಾಹನವನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ ಮುಖ ತೊಳೆದು ಅಥವಾ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಮುಂದೆ ಸಾಗಬೇಕು ಎಂದು ಸಚಿವ ರಾಮಲಿಂಗರೆಡ್ಡಿ ಮನವಿ ಮಾಡಿದ್ದಾರೆ.





