ಕಾರವಾರ, ಡಿ.26: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 28 ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಏಷ್ಯಾದ ಅತಿದೊಡ್ಡ ನೌಕಾನೆಲೆ ‘ಐಎನ್ಎಸ್ ಕದಂಬ’ (ಪ್ರಾಜೆಕ್ಟ್ ಸೀಬರ್ಡ್) ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಐತಿಹಾಸಿಕ ಭೇಟಿಯ ಹಿನ್ನೆಲೆಯಲ್ಲಿ ನೌಕಾನೆಲೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ನೌಕಾಪಡೆ ಸಂಪೂರ್ಣ ಸಿದ್ಧತೆ ನಡೆಸಿದೆ.
ಗೋವಾದಿಂದ ಕಾರವಾರಕ್ಕೆ ಹೆಲಿಕಾಪ್ಟರ್ ಪ್ರಯಾಣ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 27 ರಂದು ಗೋವಾದಲ್ಲಿ ತಂಗಲಿದ್ದು, ಡಿಸೆಂಬರ್ 28ರ ಬೆಳಿಗ್ಗೆ ವಿಶೇಷ ಹೆಲಿಕಾಪ್ಟರ್ ಮೂಲಕ ಕಾರವಾರಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ ಸುಮಾರು 10 ಗಂಟೆಗೆ ನೌಕಾನೆಲೆಗೆ ಪ್ರವೇಶಿಸಲಿರುವ ಅವರು, ನೌಕಾಪಡೆಯ ಹಿರಿಯ ಅಧಿಕಾರಿಗಳಿಂದ ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಐಎನ್ಎಸ್ ವಿಕ್ರಾಂತ್ ವೀಕ್ಷಣೆ
ದೇಶದ ಮೊದಲ ಸ್ವದೇಶಿ ವಿಮಾನ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ (INS Vikrant) ಗೆ ರಾಷ್ಟ್ರಪತಿ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಯುದ್ಧನೌಕೆಯ ತಂತ್ರಜ್ಞಾನ, ಕಾರ್ಯವಿಧಾನ, ವಾಯುಪಡೆ-ನೌಕಾಪಡೆ ಸಂಯುಕ್ತ ಕಾರ್ಯಾಚರಣೆಗಳ ಕುರಿತು ವಿವರಗಳನ್ನು ಪಡೆಯಲಿದ್ದಾರೆ. ನೌಕೆಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.
ಸಬ್‌ಮರೀನ್‌ನಲ್ಲಿ ಸಮುದ್ರದಾಳದ ಪ್ರಯಾಣ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಲಂತರ್ಗಾಮಿ ನೌಕೆಗೆ (Submarine) ಭೇಟಿ ನೀಡಿ, ಸಮುದ್ರದ ಆಳದಲ್ಲಿ ಸ್ವಲ್ಪ ಸಮಯ ಪ್ರಯಾಣ ಬೆಳೆಸುವ ಮೂಲಕ ನೌಕಾಪಡೆಯ ಕಾರ್ಯಕ್ಷಮತೆಯನ್ನು ವೀಕ್ಷಿಸಲಿದ್ದಾರೆ.. ರಾಷ್ಟ್ರಪತಿಗಳು ಸಬ್‌ಮರೀನ್‌ನಲ್ಲಿ ಪ್ರಯಾಣಿಸುವುದು ಅಪರೂಪದ ಘಟನೆ ಆಗಿದ್ದು, ಈ ವೇಳೆ ಜಲಾಂತರ್ಗಾಮಿ ತಂತ್ರಜ್ಞಾನ, ಭದ್ರತಾ ವ್ಯವಸ್ಥೆಗಳು ಹಾಗೂ ಕಾರ್ಯಾಚರಣೆಯ ಕುರಿತು ನೌಕಾಪಡೆ ಅಧಿಕಾರಿಗಳು ವಿವರ ನೀಡಲಿದ್ದಾರೆ.
ಮೀನುಗಾರಿಕೆಗೆ ತಾತ್ಕಾಲಿಕ ನಿರ್ಬಂಧ
ರಾಷ್ಟ್ರಪತಿಗಳ ಭದ್ರತೆಯ ದೃಷ್ಟಿಯಿಂದ ಡಿಸೆಂಬರ್ 28 ರಂದು ಕಾರವಾರ–ಅಂಕೋಲಾ ಕರಾವಳಿ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನ 3.30ರವರೆಗೆ ಮಾಜಾಳಿ ಇಂದ ಹಾರಾವಾಡದವರೆಗೆ ಯಾವುದೇ ಮೀನುಗಾರಿಕಾ ಬೋಟ್‌ಗಳು ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕಾ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮೀನುಗಾರರ ಸಹಕಾರವನ್ನು ಆಡಳಿತ ಕೋರಿದೆ.
ನೌಕಾನೆಲೆ ಹೈ ಅಲರ್ಟ್
ರಾಷ್ಟ್ರಪತಿಯ ಭೇಟಿ ಹಿನ್ನೆಲೆಯಲ್ಲಿ ನೌಕಾನೆಲೆಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ನೌಕಾಪಡೆಯ ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕರಾವಳಿ ಕಾವಲು ಪಡೆ, ನೌಕಾಪಡೆ, ಪೊಲೀಸ್ ಮತ್ತು ಗುಪ್ತಚರ ಇಲಾಖೆ ಸಂಯುಕ್ತವಾಗಿ ಭದ್ರತಾ ಕಾರ್ಯಾಚರಣೆ ನಡೆಸುತ್ತಿವೆ.





