ಬೆಂಗಳೂರು: ನೂರಾರು ಕನಸುಗಳನ್ನು ಹೊತ್ತು ಹಸೆಮಣೆ ಏರಿದ್ದ ಯುವತಿಯೊಬ್ಬಳು, ಮದುವೆಯಾದ ಕೇವಲ 58 ದಿನಗಳಲ್ಲಿ ವರದಕ್ಷಿಣೆಗೆ ಬಲಿಯಾಗಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಮನೆಯವರ ಒಪ್ಪಿಗೆಯಿಂದ ಗಾನವಿ ಮತ್ತು ಸೂರಜ್ ಎಂಬುವವರ ವಿವಾಹವಾಗಿತ್ತು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮತ್ತು ಆರತಕ್ಷತೆ ಶಾಸ್ತ್ರ ನಡೆಸಲಾಗಿತ್ತು. ಗಾನವಿ ಪೋಷಕರು ಸೂರಜ್ ಮನೆಯವರ ಬೇಡಿಕೆಯಂತೆ ಲಕ್ಷ ಲಕ್ಷ ಹಣ ಮತ್ತು ಚಿನ್ನಾಭರಣಗಳನ್ನು ನೀಡಿದ್ದರು. ಆದರೆ, ಮದುವೆಯ ಸಂಭ್ರಮ ಮಾಸುವ ಮುನ್ನವೇ ಸೂರಜ್ ಮತ್ತು ಆತನ ಕುಟುಂಬಸ್ಥರು ಹೆಚ್ಚಿನ ವರದಕ್ಷಿಣೆಗಾಗಿ ಗಾನವಿ ಮೇಲೆ ಮಾನಸಿಕ ಮತ್ತು ದೈಹಿಕ ಕಿರುಕುಳ ಆರಂಭಿಸಿದ್ದರು.
ವಿವಾಹದ ಬಳಿಕ ಈ ನವದಂಪತಿ 10 ದಿನಗಳ ಕಾಲ ಶ್ರೀಲಂಕಾಗೆ ಪ್ರವಾಸಕ್ಕೆ ಹೋಗಿದ್ದರು. ಹನಿಮೂನ್ ಸಮಯದಲ್ಲೂ ವರದಕ್ಷಿಣೆ ವಿಚಾರವಾಗಿ ಗಲಾಟೆ ಮಾಡಿದ್ದ ಸೂರಜ್, ಕೇವಲ 5 ದಿನಕ್ಕೆ ಪ್ರವಾಸದಿಂದ ಬೆಂಗಳೂರಿಗೆ ವಾಪಸ್ ಬಂದಿದ್ದನು. ಅಷ್ಟೇ ಅಲ್ಲದೆ, ಗಾನವಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಬೆದರಿಕೆ ಹಾಕಿದ್ದನು. ಮನೆಗೆ ಬಂದ ಪತ್ನಿಯ ಪೋಷಕರಿಗೂ ಅವಮಾನ ಮಾಡಿ, ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದನು.
ಪತಿ ಮತ್ತು ಆತನ ಮನೆಯವರ ನಿರಂತರ ಕಿರುಕುಳದಿಂದ ನೊಂದ ಗಾನವಿ, ತಾಯಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿಸಿದ್ದರೂ, ಉಸಿರುಗಟ್ಟುವಿಕೆಯಿಂದ ಮೆದುಳಿಗೆ ಹಾನಿಯಾಗಿತ್ತು (ಬ್ರೇನ್ ಡೆಡ್). ವೈದ್ಯರ ತೀವ್ರ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಗಗನಾ ಇಂದು ಸಾವನ್ನಪ್ಪಿದ್ದಾರೆ. ಆಕೆಯ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿ ಸೂರಜ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.





