ದುಬೈ: ಮರುಭೂಮಿ ದೇಶವೆಂದು ಪ್ರಸಿದ್ಧವಾದ ಅರಬ್ ಅಮೀರಾತ್ (ಯುಎಇ)ದಲ್ಲಿ ಡಿಸೆಂಬರ್ 18 ಮತ್ತು 19ರಂದು ಭಾರೀ ಮಳೆ ಸುರಿದಿದ್ದು, ದುಬೈ ಮತ್ತು ಅಬುಧಾಬಿ ನಗರಗಳು ಪ್ರವಾಹದಲ್ಲಿ ಸಿಲುಕಿವೆ. ಗುರುವಾರದಿಂದ ಆರಂಭವಾದ ಈ ಮಳೆಯು ಗುಡುಗು, ಮಿಂಚು, ಬಿರುಗಾಳಿ ಮತ್ತು ಕೆಲವೆಡೆ ಆಲಿಕಲ್ಲು ಸಹಿತ ಸುರಿದಿದ್ದು, ರಸ್ತೆಗಳು ಜಲಾವೃತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ರಾಷ್ಟ್ರೀಯ ಹವಾಮಾನ ಕೇಂದ್ರದ ಮುನ್ಸೂಚನೆಯಂತೆ, ಡಿಸೆಂಬರ್ 18ರಿಂದ 19ರವರೆಗೆ ಯುಎಇಯಾದ್ಯಂತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿತ್ತು. ಗುರುವಾರ ಸಂಜೆಯಿಂದ ಆರಂಭವಾದ ಮಳೆ ರಾತ್ರಿಯಿಡೀ ಮುಂದುವರಿದು, ಶುಕ್ರವಾರ ಬೆಳಗ್ಗೆಯೂ ಮಳೆ ಸುರಿದಿದೆ. ದುಬೈಯಲ್ಲಿ ಅಲ್ ಬರ್ಷಾ, ಅಲ್ ಕ್ವೋಜ್, ಜೆಬೆಲ್ ಅಲಿ ಮತ್ತು ಇತರ ಪ್ರದೇಶಗಳಲ್ಲಿ ರಸ್ತೆಗಳು ನೀರಿನಡಿ ಮುಳುಗಿ, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಬುಧಾಬಿಯಲ್ಲಿಯೂ ರಾತ್ರಿಯಿಡೀ ಬಿರುಗಾಳಿ ಸಹಿತ ಮಳೆಯಾಗಿ, ಕಡಲತೀರಗಳು ಮತ್ತು ಉದ್ಯಾನವನಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟವು.
ಈ ಭಾರೀ ಮಳೆಯಿಂದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳು ರದ್ದಾಗಿದ್ದವು. . ಎಮಿರೇಟ್ಸ್ ಮತ್ತು ಫ್ಲೈದುಬೈ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಡಜನ್‌ಗಟ್ಟಲೆ ವಿಮಾನಗಳನ್ನು ರದ್ದುಗೊಳಿಸಿದವು. ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣದಲ್ಲಿ ಸಿಲುಕಿದರು. ರಸ್ತೆಗಳಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗಿ, ಅನೇಕರು ಮನೆಗೆ ತಲುಪಲು ತೊಂದರೆ ಅನುಭವಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ದುಬೈ ಮತ್ತು ಅಬುಧಾಬಿ ಸರ್ಕಾರಗಳು ಸಾರ್ವಜನಿಕರಿಗೆ ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಿದ್ದವು. ದುಬೈ ಸರ್ಕಾರಿ ನೌಕರರಿಗೆ ಶುಕ್ರವಾರ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿತ್ತು. ಖಾಸಗಿ ವಲಯಕ್ಕೂ ಇದೇ ರೀತಿಯ ಸಲಹೆ ನೀಡಲಾಯಿತು. ಅಬುಧಾಬಿಯಲ್ಲಿ ಕಡಲತೀರಗಳು, ಉದ್ಯಾನವನಗಳು, ಪ್ರವಾಸಿ ಸ್ಥಳಗಳು ಮತ್ತು ಗ್ಲೋಬಲ್ ವಿಲೇಜ್ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಪೊಲೀಸರು ಮತ್ತು ಸಿವಿಲ್ ಡಿಫೆನ್ಸ್ ತಂಡಗಳು ರಸ್ತೆಗಳಿಂದ ನೀರು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದವು.
ಯುಎಇಯಲ್ಲಿ ಡಿಸೆಂಬರ್ ತಿಂಗಳ ಸಾಮಾನ್ಯ ಮಳೆಯ ಪ್ರಮಾಣ ಕೇವಲ 8-15 ಮಿ.ಮೀ. ಆಗಿದ್ದು, ಈ ಬಾರಿ ಒಂದೇ ದಿನದಲ್ಲಿ ಹಲವು ಪ್ರದೇಶಗಳಲ್ಲಿ 50 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಶಾರ್ಜಾದಲ್ಲಿ 58 ಮಿ.ಮೀ., ದುಬೈಯಲ್ಲಿ 49 ಮಿ.ಮೀ., ರಾಸ್ ಅಲ್ ಖೈಮಾದಲ್ಲಿ 62 ಮಿ.ಮೀ. ಮಳೆ ದಾಖಲಾಗಿದೆ.
ಇದೇ ಸಮಯದಲ್ಲಿ ನೆರೆಯ ಸೌದಿ ಅರೇಬಿಯಾದಲ್ಲಿ ತಬೂಕ್, ಹೈಲ್ ಮತ್ತು ಟ್ರೋಜೆನಾ ಪ್ರದೇಶಗಳಲ್ಲಿ ಹಿಮಪಾತವಾಗಿದ್ದು, ಮರುಭೂಮಿ ಪ್ರದೇಶಗಳು ಬಿಳಿ ಹಿಮದಿಂದ ಆವೃತವಾಗಿವೆ. ತಾಪಮಾನ ಶೂನ್ಯಕ್ಕಿಂತ ಕೆಳಗೆ ಇಳಿದಿದೆ.





