ತಿರುವನಂತಪುರ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದ ಚಿನ್ನದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೀಗ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆಯ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯಲ್ಲಿ ನೆಲೆಸಿರುವ ಆಭರಣ ವ್ಯಾಪಾರಿ ಗೋವರ್ಧನ್ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳನ್ನು ಕೆಲಸದ ನೆಪದಲ್ಲಿ ತೆಗೆದುಕೊಂಡು ಹೋಗಿದ್ದ ಪಂಕಜ್ ಭಂಡಾರಿ, ಅವುಗಳಲ್ಲಿ ಅಳವಡಿಸಲಾಗಿದ್ದ ಚಿನ್ನದ ಭಾಗವನ್ನು ತೆಗೆದು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಮೂರ್ತಿಗಳ ಮೂಲ ತೂಕಕ್ಕಿಂತ ಕಡಿಮೆ ತೂಕ ಕಂಡುಬಂದಿರುವುದು ಈ ಕಳ್ಳತನದ ಶಂಕೆ ವ್ಯಕ್ತವಾಗಿತ್ತು. ಮೂರ್ತಿಗಳಿಂದ ತೆಗೆದ ಚಿನ್ನವನ್ನು ಬಳ್ಳಾರಿಯ ಆಭರಣ ವ್ಯಾಪಾರಿ ಗೋವರ್ಧನ್ ಅವರಿಗೆ ಮಾರಾಟ ಮಾಡಲಾಗಿದೆ ಎಂದು ಎಸ್‌ಐಟಿ ಆರೋಪಿಸಿದೆ.
ಈ ಪ್ರಕರಣದ ಆರಂಭಿಕ ತನಿಖೆಯಲ್ಲಿ ಅಕ್ಟೋಬರ್ 28 ರಂದು ಎಸ್‌ಐಟಿ ತಂಡವು ಗೋವರ್ಧನ್ ಅವರ ಬಳ್ಳಾರಿಯ ಚಿನ್ನದ ಅಂಗಡಿಗೆ ದಾಳಿ ನಡೆಸಿತ್ತು. ದಾಳಿ ವೇಳೆ ಗೋವರ್ಧನ್, ಈ ಹಗರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದರು. ಚಿನ್ನದ ಹೊದಿಕೆಯ ಬಾಗಿಲಿಗೆ ಸಂಬಂಧಿಸಿದಂತೆ ತಾನು ದೇಣಿಗೆಯಾಗಿ ಹಣ ನೀಡಿದ್ದೇನೆ ಹೊರತು, ಕಳ್ಳತನಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದರು.
ಆದರೆ ಈ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ನೀಡಿದ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ. 2019ರಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಚಿನ್ನದ ಲೇಪಿತ ಬಾಗಿಲನ್ನು ಸಮರ್ಪಿಸುವ ಉದ್ದೇಶದಿಂದ ಗೋವರ್ಧನ್ ಅವರನ್ನು ಸಂಪರ್ಕಿಸಿದ್ದೆ ಎಂದು ಉನ್ನಿಕೃಷ್ಣನ್ ಪೊಟ್ಟಿ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ತಯಾರಿಸಲಾದ ಹೊಸ ಬಾಗಿಲನ್ನು ಶಬರಿಮಲೆ ದೇವಸ್ಥಾನಕ್ಕೆ ಸಾಗಿಸುವ ಮೊದಲು ಗೋವರ್ಧನ್ ಅವರ ಆಭರಣ ಅಂಗಡಿಯಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಇಬ್ಬರ ಬಂಧನದೊಂದಿಗೆ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಡಿಸೆಂಬರ್ 17ರಂದು ಶಬರಿಮಲೆಯ ಮಾಜಿ ಆಡಳಿತಾಧಿಕಾರಿ ಶ್ರೀಕುಮಾರ್ ಅವರನ್ನು ಎಸ್‌ಐಟಿ ಬಂಧಿಸಿತ್ತು. 2019ರಲ್ಲಿ ದ್ವಾರಪಾಲಕ ವಿಗ್ರಹಗಳ ಚಿನ್ನದ ಫಲಕಗಳನ್ನು ತೆಗೆದು ಚೆನ್ನೈಗೆ ಸಾಗಿಸಿದ ಸಮಯದಲ್ಲಿ ಅವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಇದಕ್ಕೂ ಮೊದಲು, ನವೆಂಬರ್ ತಿಂಗಳಲ್ಲಿ ಎಸ್‌ಐಟಿ ಮಾಜಿ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಅಧ್ಯಕ್ಷ ಹಾಗೂ ಸಿಪಿಎಂ ನಾಯಕ ಎ. ಪದ್ಮಕುಮಾರ್ ಅವರನ್ನು ಬಂಧಿಸಿತ್ತು. ಈ ಪ್ರಕರಣದಲ್ಲಿ ಅವರನ್ನು ಎಂಟನೇ ಆರೋಪಿ ಎಂದು ಹೆಸರಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಸೇರಿದಂತೆ, ಮಾಜಿ ಟಿಡಿಬಿ ಅಧ್ಯಕ್ಷ ಎನ್. ವಾಸು, ಮಾಜಿ ಆಡಳಿತಾಧಿಕಾರಿ ಮುರಾರಿ ಬಾಬು, ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಡಿ. ಸುಧೀಶ್ ಕುಮಾರ್ ಹಾಗೂ ತಿರುವಾಭರಣಂನ ಮಾಜಿ ಆಯುಕ್ತ ಕೆ.ಎಸ್. ಬೈಜು ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ.





