ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧದ ವಿಚಾರಣೆ ಇಂದು ಬೆಂಗಳೂರಿನ 57ನೇ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ (CCH-57) ಪ್ರಾರಂಭವಾಗಲಿದೆ. ನ್ಯಾಯಾಧೀಶ ಐ.ಪಿ. ನಾಯ್ಕ್ ಅವರಿದ್ದ ಕೋರ್ಟ್‌ನಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಚಾರಣೆ ಆರಂಭವಾಗುವ ನಿರೀಕ್ಷೆಯಿದೆ. ಈ ಪ್ರಕರಣದಲ್ಲಿ ಮೊದಲ ಸಾಕ್ಷಿಗಳಾಗಿ ರೇಣುಕಾಸ್ವಾಮಿ ಅವರ ತಂದೆ ಕಾಶೀನಾಥಯ್ಯ ಶಿವನಗೌಡ್ರು ಮತ್ತು ತಾಯಿ ರತ್ನಪ್ರಭಾ ಅವರು ಖುದ್ದು ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ನೀಡಲಿದ್ದಾರೆ.
ಕೋರ್ಟ್ ಈಗಾಗಲೇ ರೇಣುಕಾಸ್ವಾಮಿ ಪೋಷಕರಿಗೆ ಸಮನ್ಸ್ ಜಾರಿ ಮಾಡಿದ್ದು, ಅವರು ಮಗನ ಹಿನ್ನೆಲೆ, ಕೊನೆಯ ಭೇಟಿ, ಅಪಹರಣ ಮತ್ತು ಶವ ಪತ್ತೆಯ ಬಗ್ಗೆ ವಿವರಗಳನ್ನು ನ್ಯಾಯಾಲಯಕ್ಕೆ ತಿಳಿಸಲಿದ್ದಾರೆ. ಇದು ಪ್ರಾಸಿಕ್ಯೂಷನ್‌ಗೆ ಮಹತ್ವದ ಹಂತವಾಗಿದ್ದು, ಸಾಕ್ಷ್ಯ ವಿಚಾರಣೆಯ ಮೂಲಕ ಪ್ರಕರಣಕ್ಕೆ ತಿರುವು ಬರಬಹುದು ಎಂಬ ನಿರೀಕ್ಷೆಯಿದೆ.
ದರ್ಶನ್ ಸೇರಿ ಆರೋಪಿಗಳ ಹಾಜರಾತಿ ಹೇಗೆ? ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿತರಾಗಿರುವ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಉಳಿದ 10 ಆರೋಪಿಗಳು ಖುದ್ದು ಕೋರ್ಟ್ ಆವರಣಕ್ಕೆ ಆಗಮಿಸಲಿದ್ದಾರೆ. ಪ್ರಕರಣದಲ್ಲಿ ಒಟ್ಟು 260ಕ್ಕೂ ಹೆಚ್ಚು ಸಾಕ್ಷಿಗಳಿದ್ದು, ಎಫ್‌ಎಸ್‌ಎಲ್, ಪ್ರತ್ಯಕ್ಷ ಮತ್ತು ತಾಂತ್ರಿಕ ಸಾಕ್ಷಿಗಳ ಪಟ್ಟಿಯನ್ನು ಪ್ರಾಸಿಕ್ಯೂಷನ್ ಈಗಾಗಲೇ ಸಲ್ಲಿಸಿದೆ.
ಜೈಲಿನಲ್ಲಿ ಡಿ-ಗ್ಯಾಂಗ್‌ಗೆ ಟೆನ್ಷನ್. ಟ್ರಯಲ್ ಆರಂಭದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಸೇರಿದಂತೆ ಡಿ-ಗ್ಯಾಂಗ್ ಸದಸ್ಯರು ತೀವ್ರ ಟೆನ್ಷನ್‌ನಲ್ಲಿದ್ದಾರೆ ಎನ್ನಲಾಗಿದೆ. ಕಳೆದ ರಾತ್ರಿ ಇಡೀ ನಿದ್ರೆ ಬಾರದೆ ಚಡಪಡಿಕೆಯಲ್ಲಿದ್ದ ದರ್ಶನ್, ಸಹ ಬಂಧಿಗಳೊಂದಿಗೆ ಪ್ರಕರಣದ ಬಗ್ಗೆ ಚರ್ಚೆ ನಡೆಸಿದ್ದರು. ಬೆಳಗ್ಗೆ ಎದ್ದು ದೇವರ ಪೋಟೋಗೆ ನಮಸ್ಕಾರ ಮಾಡಿ, ಬ್ಯಾರಕ್‌ನಲ್ಲಿ ವಾಕಿಂಗ್ ಮಾಡುತ್ತಾ ಮೌನವಾಗಿ ಕುಳಿತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಡಿಜಿಪಿ ಅಲೋಕ್ ಕುಮಾರ್ ಜೈಲಿಗೆ ಭೇಟಿ ನೀಡಿ ಟ್ರಯಲ್ ಬಗ್ಗೆ ಮಾತನಾಡಿದ್ದು, ಇದು ಆರೋಪಿಗಳಲ್ಲಿ ಆತಂಕ ಹೆಚ್ಚಿಸಿದೆ.
ಪ್ರಕರಣದಲ್ಲಿ ಸಾಕ್ಷಿಗಳು ಹೈವಿಟ್ನೆಸ್ ಆಗಿ ಹಾಜರಾಗಿ ದೃಢವಾದ ಸಾಕ್ಷ್ಯ ನೀಡಿದರೆ ಡಿ-ಗ್ಯಾಂಗ್‌ಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂಬ ಚರ್ಚೆಯಿದೆ.
ಪ್ರಕರಣದ ಹಿನ್ನೆಲೆ : 2024ರ ಜೂನ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಅವರು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಕೋಪಗೊಂಡ ದರ್ಶನ್ ಮತ್ತು ಸಹಚರರು ಅಪಹರಿಸಿ, ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿ ಕೊಂದಿದ್ದಾರೆ ಎಂಬ ಆರೋಪವಿದೆ. ಶವವನ್ನು ಕಾಲುವೆಯಲ್ಲಿ ಎಸೆದಿದ್ದರು. ದರ್ಶನ್ ಅವರನ್ನು ಆರೋಪಿ ಸಂಖ್ಯೆ 2 ಮತ್ತು ಪವಿತ್ರಾ ಗೌಡ ಅವರನ್ನು ಆರೋಪಿ ಸಂಖ್ಯೆ 1 ಆಗಿ ಗುರುತಿಸಲಾಗಿದೆ.
ನವೆಂಬರ್‌ನಲ್ಲಿ ದೋಷಾರೋಪಣ ನಿಗದಿಯಾಗಿದ್ದು, ಎಲ್ಲ ಆರೋಪಿಗಳು ಆರೋಪಗಳನ್ನು ನಿರಾಕರಿಸಿದ್ದಾರೆ. ಈಗ ಸಾಕ್ಷ್ಯ ವಿಚಾರಣೆಯೊಂದಿಗೆ ಪ್ರಕರಣ ಮತ್ತಷ್ಟು ತೀವ್ರಗೊಳ್ಳಲಿದೆ. ಪ್ರಾಸಿಕ್ಯೂಷನ್ ಘಟನಾ ಸ್ಥಳ ಪರಿಶೀಲನೆ ಸೇರಿದಂತೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಈ ಪ್ರಕರಣ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದ್ದು, ಟ್ರಯಲ್ ಫಲಿತಾಂಶದ ಕಡೆಗೆ ಎಲ್ಲರ ಗಮನವಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಕ್ಷಿಗಳ ವಿಚಾರಣೆ ನಡೆಯಲಿದೆ.





