ಮಳವಳ್ಳಿ (ಡಿ.16): ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಯನ್ನು ಸ್ವಾಗತಿಸಲು ಸಜ್ಜಾಗಿದೆ. ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವದ ಮಹತ್ವದ ಕಾರ್ಯಕ್ರಮಕ್ಕೆ ಮಂಗಳವಾರ (ಡಿ.17) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಲಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ, “ಮಳವಳ್ಳಿಗೆ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಆಗಮಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ರಾಷ್ಟ್ರಪತಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ” ಎಂದು ತಿಳಿಸಿದರು.
ಮಂಗಳವಾರ ಮಧ್ಯಾಹ್ನ 3.15 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಈ ಮಹತ್ವದ ಸಮಾರಂಭಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಹಲವು ಗಣ್ಯರು, ಸಾಧುಸಂತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನರೇಂದ್ರಸ್ವಾಮಿ ಮಾಹಿತಿ ನೀಡಿದರು.
ಸುತ್ತೂರು ಮಠದ ಜಯಂತ್ಯುತ್ಸವವು ಐದು ದಿನಗಳ ಕಾಲ ವೈಭವದಿಂದ ನಡೆಯಲಿದ್ದು, ನಾಟಕ ಪ್ರದರ್ಶನ, ಉಪನ್ಯಾಸ ಮಾಲಿಕೆ, ವಾದ್ಯಗೋಷ್ಠಿ, ಸಂಗೀತ ಸಂಜೆ, ವಚನ ನೃತ್ಯರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.
ಇದೇ ವೇಳೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ, ರಾಷ್ಟ್ರಪತಿ ಅವರ ಆಗಮನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಸಿದ್ಧತೆಯಲ್ಲಿದೆ ಎಂದು ತಿಳಿಸಿದರು. ಮಾರೇಹಳ್ಳಿ ಬಳಿ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದ್ದು, ಮೂರು ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್‌ಗೆ ಅಗತ್ಯ ಜಾಗ ಗುರುತಿಸಲಾಗಿದೆ ಎಂದು ಹೇಳಿದರು.
ಭದ್ರತಾ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದ ಅವರು, ರಾಷ್ಟ್ರಪತಿ ಭೇಟಿಯ ಹಿನ್ನೆಲೆಯಲ್ಲಿ ಇಬ್ಬರು ಎಸ್‌ಪಿ, ನಾಲ್ವರು ಡಿವೈಎಸ್‌ಪಿ ಸೇರಿದಂತೆ 1000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದಲ್ಲಿ ವಾಹನ ಸಂಚಾರ ನಿಯಂತ್ರಣ, ಸಾರ್ವಜನಿಕರ ಸುರಕ್ಷತೆ ಹಾಗೂ ಕಾರ್ಯಕ್ರಮ ಸುಗಮವಾಗಿ ನಡೆಯುವಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ಸ್ವಚ್ಛತೆ, ರಸ್ತೆ ಅಲಂಕಾರ, ವಿದ್ಯುತ್ ದೀಪಾಲಂಕಾರ ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಲಾಗಿದ್ದು,





