ಬೆಂಗಳೂರು: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕನಕಪುರ ಮುಖ್ಯ ರಸ್ತೆ ಬಳಿ ನಡೆದಿದೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಾರುಣ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಅಗರ ಗ್ರಾಮದ ಬಳಿ ನಡೆದಿದೆ.
ಅಪಘಾತದ ವಿವರ
ಬೆಂಗಳೂರು ಕಡೆಯಿಂದ ಕನಕಪುರದತ್ತ ಹೋಗುತ್ತಿದ್ದ ಒಂದು ಬೈಕ್‌ಗೆ ಎದುರಿನಿಂದ ಬಂದ ಮತ್ತೊಂದು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬೈಕ್‌ಗಳು ರಸ್ತೆಯಲ್ಲಿ ಹಾರಿ ಬಿದ್ದಿದ್ದು, ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ರಕ್ಷಣೆ ಮಾಡಲು ಪ್ರಯತ್ನಿಸಿದರೂ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒರ್ವನ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಸುದ್ದಿ ತಿಳಿದು ಕಗ್ಗಲೀಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುವನ್ನು ತಕ್ಷಣ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಮೃತರ ಗುರುತು ಮತ್ತು ಕುಟುಂಬದ ಮಾಹಿತಿ ಕಲೆಹಾಕುತ್ತಿದ್ದಾರೆ.
ಕಾರು-ಬಸ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ದುರ್ಮ*ರಣ
ಚಿಕ್ಕಬಳ್ಳಾಪುರ: ಬೆಂಗಳೂರು-ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ದೇವನಹಳ್ಳಿ ತಾಲ್ಲೂಕಿನ ರಾಣಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರದ ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಖಾಸಗಿ ಕಾರೊಂದು ಡಿವೈಡರ್ ಹಾರಿ, ಎದುರು ದಿಕ್ಕಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿದೆ. ಇದರ ಪರಿಣಾಮವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅನೇಕ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಸಾವನ್ನಪ್ಪಿದವರನ್ನು ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಗ್ರಾಮದವರೆಂದು ಗುರುತಿಸಲಾಗಿದೆ. ಸುಮನ್ (25), ಸಾಗರ್ (26) ಮತ್ತು ಮೋಹನ್ (33) ಎಂಬ ಮೂವರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತ ದೇಹಗಳನ್ನು ಪೋಸ್ಟ್-ಮಾರ್ಟಂಗಾಗಿ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆಯು ಇಂದು (ಡಿ.11)ರ ಬೆಳಗ್ಗೆ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ 44 (ಪೂರ್ವ ಬೆಂಗಳೂರು-ಚಿಕ್ಕಬಳ್ಳಾಪುರ ರಸ್ತೆ) ಮೇಲೆ ದೇವನಹಳ್ಳಿಯಿಂದ ಸುಮಾರು 10-12 ಕಿಮೀ ದೂರದ ರಾಣಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ತನಿಖೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಅತೀ ವೇಗವಾಗಿ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರು ಹಠಾತ್ತನೆ ನಿಯಂತ್ರಣ ಕಳೆದುಕೊಂಡು ಕಾಂಕ್ರೀಟ್ ಡಿವೈಡರ್‌ಗೆ ಹಾರಿ ಎದುರು ದಿಕ್ಕಿನೊಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಘರ್ಷಣೆಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಬಸ್ಸಿನ ಮುಂಭಾಗದ ಭಾಗವೂ ಗಂಭೀರವಾಗಿ ಹಾನಿಗೊಂಡಿದೆ.
ಅಪಘಾತದ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ 15 ರಿಂದ 20 ಮಂದಿ ಪ್ರಯಾಣಿಕರು ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಕಾರು ಡಿಕ್ಕಿಯ ಪರಿಣಾಮ ಬಸ್ಸಿನ ಮುಂಬಾಗದಲ್ಲಿ ಕುಳಿತಿದ್ದ ಅನೇಕರಿಗೆ ಗಾಯವಾಗಿದೆ. ಗಾಯಗೊಂಡವರನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆ ಮತ್ತು ಬೆಂಗಳೂರಿನ ಇತರ ಆಸ್ಪತ್ರೆಗಳಿಗೆ ತ್ವರಿತವಾಗಿ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ದೇವನಹಳ್ಳಿ ಸಂಚಾರಿ ಪೊಲೀಸರು ಮಾಹಿತಿ ದಾಖಲಿಸಿದ್ದಾರೆ. ಅಪಘಾತದ ಕಾರಣಗಳನ್ನು ಕಂಡುಹಿಡಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರಿನ ಚಾಲಕನ ವೇಗ, ಅವನ ಆರೋಗ್ಯ ಸ್ಥಿತಿಗಳನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪೊಲೀಸರು ಸಾಕ್ಷಿಗಳನ್ನು ಪತ್ತೆಹಚ್ಚಿ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಅಪಘಾತದ ಸ್ಥಳದಲ್ಲಿ ಸಲ್ಪ ಸಮಯ ಸಂಚಾರ ಸ್ಥಗಿತಗೊಂಡಿತ್ತು ಬಳಿಕ ಬಸ್ ಹಾಗೂ ಕಾರುಗಳನ್ನ ರಸ್ತೆಯಿಂದ ತೆಗೆದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.





