ಹಾಸನ: ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಕೊಂದು, ಅದನ್ನ ‘ಸೆಲ್ಫಿ ವಿಡಿಯೋ’ ಮಾಡಿದ ಆರೋಪಿಯನ್ನು ಹಾಸನ ನಗರ ಪೊಲೀಸರು ಬಂಧಿಸಿದ್ದಾರೆ. ಈತ ಎರಡು ದಿನದ ಹಿಂದೆ ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ಪ್ರದೇಶದಲ್ಲಿ ತನ್ನ ಸ್ನೇಹಿತನನ್ನು ಕೊಲೆ ಮಾಡಿ ವೀಡಿಯೋ ಮಾಡಿದ್ದನು.
ಬಂಧಿತ ಆರೋಪಿ ಉಲ್ಲಾಸ್ (21). ಹತ್ಯೆಗೀಡಾದವನು ಅವನ ಸ್ನೇಹಿತ ಕೀರ್ತಿ. ಇಬ್ಬರೂ ಆಟೋ ರಿಕ್ಷಾ ಚಾಲಕರಾಗಿದ್ದು, ಸುಮಾರು ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದ್ದು, ಎರಡು ದಿನಗಳ ಹಿಂದೆ ಇಬ್ಬರೂ ಒಟ್ಟಿಗೆ ಎಣ್ಣೆ ಪಾರ್ಟಿ ಮಾಡಿದ್ದರು. ಆ ವೇಳೆ ಕ್ಷುಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ತೀವ್ರವಾದಾಗ ಕೀರ್ತಿ ಉಲ್ಲಾಸನ ಕಪಾಳಕ್ಕೆ ಹೊಡೆದಿದ್ದ ಇದರಿಂದ ಕೋಪಗೊಂಡ ಉಲ್ಲಾಸ್, ಮತ್ತಷ್ಟು ಮದ್ಯಪಾನ ಮಾಡಿ, ಮತ್ತಿಬ್ಬರ ಜೊತೆಗೂಡಿ ಕೀರ್ತಿಯನ್ನು ಪಾರ್ಟಿ ನಡೆದ ಸ್ಥಳದಿಂದ ಹೊರಗೆ ಕರೆದೊಯ್ದಿದ್ದಾರೆ. ನಂತರ ಕೀರ್ತಿಗೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇದಿಷ್ಟು ಸಾಲದೆ ಉಲ್ಲಾಸ್ ತನ್ನ ಪೋನ್‌ನಲ್ಲಿ ಈ ಕೊಲೆಯಾದ ಕೀರ್ತಿ ಜೊತೆ ಸೆಲ್ಫಿ ವೀಡಿಯೋ ಮಾಡಿದ್ದಾನೆ.
ವಿಡಿಯೋದ ಆಧಾರದ ಹಾಸನ ಪೊಲೀಸರು ಉಲ್ಲಾಸನನ್ನು ಬಂಧಿಸಿದ್ದಾರೆ. ಆದರೆ, ಈ ಹಲ್ಲೆ ಮತ್ತು ಹತ್ಯೆಯಲ್ಲಿ ಉಲ್ಲಾಸನ ಜೊತೆಗೆ ಇನ್ನೂ ಮತ್ತಿಬ್ಬರು ಭಾಗವಹಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸಧ್ಯ ಪೊಲೀಸರು ಉಲ್ಲಾಸ್‌ನನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳ ಹೆಸರುಗಳನ್ನ ಬಹಿರಂಗ ಪಡಿಸಿಲ್ಲವಾದರೂ ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ಕೊಲೆಗೆ ನಿಖರ ಕಾರಣ ಇನ್ನೂ ತಿಳಿಬಂದಿಲ್ಲ. ಮದ್ಯಪಾನ ಮಾಡಿ ಮತ್ತಿನಲಿದ್ದ ಇಬ್ಬರ ನಡುವೆ ಜಗಳವಾಗಿ ಕೋಪದಲ್ಲಿ ಜಗಳ ಮಾಡಿದ್ದಾರೆಯೇ ಅಥವಾ ಹಳೆಯ ದ್ವೇಷವೇನಾದರೂ ಈ ಘಟನೆಗೆ ಕಾರಣವಾಗಿದೆಯೇ ಎಂದು ತನಿಖೆಯಿಂದ ತಿಳಿಯಬೇಕಿದೆ.
ಈ ಘಟನೆಯ ಬಗ್ಗೆ ತಿಳಿಸ ಸಾರ್ವಜನಿಕರು ಹಾಸನ ನಗರದಲ್ಲಿ ಭಯದ ಬೀತಿ ಹುಟ್ಟಿಸಿದೆ. ಆರೋಪಿ ಉಲ್ಲಾಸ್‌ನನ್ನು ನ್ಯಾಯಾಲಯದಲ್ಲಿ ಹಾಜರು ಮಾಡಲಾಗುವುದು. ಪೊಲೀಸರು ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಶೋಧನೆ ನಡೆಸುತ್ತಾರೆ. ವಿಡಿಯೋ ಸಾಕ್ಷ್ಯವನ್ನು ಪೊಲೀಸರು ಸುರಕ್ಷಿತವಾಗಿ ಸಂರಕ್ಷಿಸಿ, ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಲಿದ್ದಾರೆ. ಹತ್ಯೆಯ ಪ್ರೇರಣೆ ಮತ್ತು ಇನ್ನಷ್ಟು ವಿವರಗಳನ್ನು ಬಹಿರಂಗಪಡಿಸಲು ತನಿಖೆ ಮುಂದುವರೆದಿದೆ. ಅದೇನೆ ಆಗಿರಲಿ ಕೋಪದಲ್ಲಿ ಎರಡು ವರ್ಷದಿಂದ ಜೊತೆಗಿದ್ದ ಸ್ನೇಹಿತನನ್ನೇ ಕೊಲೆ ಮಾಡುವ ಹಂತಕ್ಕೆ ಹೋಗಿದ್ದಾನೆಂದರೆ ಈ ಘಟನೆಗೆ ಕಾರಣ ಏನಿರಬಹುದು ಕಾದು ನೋಡಬೇಕಿದೆ.





