ಬೆಂಗಳೂರು, ಡಿ.11: ಕರ್ನಾಟಕ ರಾಜ್ಯದಾದ್ಯಂತ ಮುಂದಿನ ಮೂರು ದಿನಗಳಲ್ಲಿ (ಡಿಸೆಂಬರ್ 12, 13 ಮತ್ತು 14) ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಉತ್ತರ ಕರ್ನಾಟಕ, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ನಿರೀಕ್ಷೆಯಿದೆ. ಜೊತೆಗೆ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಗಾಳಿಯ ಜೊತೆಗೆ ತಂಪಾದ ವಾತಾವರಣವೂ ನಿರೀಕ್ಷಿತವಾಗಿದೆ. ಡಿಸೆಂಬರ್ ತಿಂಗಳ ಆರಂಭದಿಂದಲೇ ರಾಜ್ಯದಲ್ಲಿ ಚಳಿಗಾಲದ ಲಕ್ಷಣಗಳು ಕಂಡುಬರುತ್ತಿದ್ದು, ಈ ಬಾರಿ ಮಳೆಯ ಸಾಧ್ಯತೆಯಿಂದ ತಾಪಮಾನದಲ್ಲಿ ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಗರಿಷ್ಠ ತಾಪಮಾನ 26° ಸೆಲ್ಸಿಯಸ್ ಸುಮಾರಿನಲ್ಲಿ ಇರಲಿದ್ದು, ಕನಿಷ್ಠ ತಾಪಮಾನ 13° ಸೆಲ್ಸಿಯಸ್‌ವರೆಗೆ ಇಳಿಯುವ ಸಾಧ್ಯತೆ ಇದೆ. ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಮತ್ತು ಸಂಜೆ 6 ರ ನಂತರ ದಟ್ಟ ಮಂಜು ಮತ್ತು ತಂಪಾದ ಗಾಳಿಯಿಂದ ಚಳಿ ಜಾಸ್ತಿಯಾಗಿ ಅನುಭವವಾಗಲಿದೆ. ಇದರಿಂದ ಬೈಕ್ ಸವಾರರು ಹಾಗೂ ಬೆಳಗ್ಗೆ ವಾಕಿಂಗ್ ಹೋಗುವವರು ಜಾಕೆಟ್, ಶಾಲು ಧರಿಸುವುದು ಸೂಕ್ತ.
ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಗರಿಷ್ಠ 26° ಮತ್ತು ಕನಿಷ್ಠ 14° ಸೆಲ್ಸಿಯಸ್ ತಾಪಮಾನ ನಿರೀಕ್ಷಿತವಾಗಿದೆ. ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿಯೂ ಕನಿಷ್ಠ ತಾಪಮಾನ 13-14° ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ ಇದೆ
ಮಂಗಳೂರು, ಉಡುಪಿ, ಕಾರವಾರ ಪ್ರದೇಶದಲ್ಲಿ ಗರಿಷ್ಠ ತಾಪಮಾನ 31-32° ಸೆಲ್ಸಿಯಸ್ ಇದ್ದರೂ ರಾತ್ರಿ ಮತ್ತು ಬೆಳಗ್ಗೆ ಕನಿಷ್ಠ ತಾಪಮಾನ 22-23° ಸೆಲ್ಸಿಯಸ್‌ಗೆ ಇಳಿಯುತ್ತದೆ. ಆರ್ದ್ರತೆಯ ಪ್ರಮಾಣ ಶೇ.80-90ರಷ್ಟು ಇರುವುದರಿಂದ ಆರಾಮದಾಯಕ ವಾತಾವರಣ ಇರುತ್ತದೆ. ಈ ಭಾಗದಲ್ಲಿ ಸಾಧಾರಣ ಮಳೆಯೂ ಸಾಧ್ಯತೆ ಇದೆ.
ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಭಾಗದಲ್ಲಿ ಕನಿಷ್ಠ ತಾಪಮಾನ 13-14° ಸೆಲ್ಸಿಯಸ್‌ಗೆ ಇಳಿಯುತ್ತಿದ್ದು, ಬೆಳಗ್ಗೆ ದಟ್ಟ ಮಂಜು ಕಂಡುಬರಬಹುದು. ವಾಹನ ಸವಾರರು ಮುಂಜಾನೆ ಹೆಡ್‌ಲೈಟ್ ಆನ್ ಮಾಡಿ ಎಚ್ಚರಿಕೆಯಿಂದ ಪ್ರಯಾಣಿಸಬೇಕು.
ಪ್ರಮುಖ ನಗರಗಳ ತಾಪಮಾನ ವಿವರ (ಗರಿಷ್ಠ-ಕನಿಷ್ಠ °C)
- ಬೆಂಗಳೂರು: 26-13
- ಮಂಗಳೂರು: 32-22
- ಮಡಿಕೇರಿ: 26-14
- ಮೈಸೂರು: 28-15
- ಶಿವಮೊಗ್ಗ: 29-14
- ಬೆಳಗಾವಿ: 27-14
- ಹಾಸನ: 26-13
- ಚಿಕ್ಕಮಗಳೂರು: 24-13
- ತುಮಕೂರು: 32-21
- ಹುಬ್ಬಳ್ಳಿ: 28-14
- ಕಲಬುರಗಿ: 28-13
- ಬೀದರ್: 26-13
ಈ ಮೂರು ದಿನಗಳಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಭಾರೀ ಮಳೆ ಅಥವಾ ಗಾಳಿಯ ಎಚ್ಚರಿಕೆ ಇಲ್ಲ. ಆದರೆ ಬೆಳಗ್ಗೆ-ಸಂಜೆ ಚಳಿ ಅತೀ ಹೆಚ್ಚು ಚಳಿ ಹಾಗೂ ಮಂಜಿನಿಂದಾಗಿ ಜನರು ಆರೋಗ್ಯ ಕಾಳಜಿ ವಹಿಸಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.





