ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ಮತದಾರರ ಪಟ್ಟಿಗಳು ಮತ್ತು ಮತ ಕಳ್ಳತನದ ಕುರಿತ ಚರ್ಚೆ ಮತ್ತೊಮ್ಮೆ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಮತ ಕಳ್ಳತನ ನಡೆಯುತ್ತಿದೆ ಎಂದು ಆರೋಪಿಸಿದ ಬಳಿಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಕೇವಲ ಈಗಿನ ಸರ್ಕಾರವಲ್ಲ, ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿಯ ಕಾಲದಿಂದಲೇ ಚುನಾವಣಾ ವ್ಯವಸ್ಥೆಯಲ್ಲಿ ಮತ ದೋಚುವ ಪದ್ಧತಿ ಮುಂದುವರಿದಿದೆ ಎಂದು ಶಾ ಕಿಡಿಕಾರಿದರು.
ವಿಷಯವು ಚರ್ಚೆಗೆ ಬಂದ ತಕ್ಷಣವೇ ಸಂಸತ್ತಿನ ಕಲಾಪದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ವಾಕ್ಸಮರ ತೀವ್ರಗೊಂಡಿತ್ತು. ರಾಹುಲ್ ಗಾಂಧಿಯವರು ಮತ ಚೋರಿ ಕುರಿತು ಸರ್ಕಾರ ಚರ್ಚೆಗೆ ಬರುವ ಧೈರ್ಯ ತೋರಲಿ ಎಂದು ಸವಾಲು ಹಾಕಿದರು. ಇದಕ್ಕೆ ಪ್ರತಿಯಾಗಿ ಅಮಿತ್ ಶಾ ಮಾತನಾಡಿದ್ದು, ವಿರೋಧ ಪಕ್ಷಗಳು ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಬಗ್ಗೆ ಏಕೆ ಚಿಂತಿಸುತ್ತಿವೆ ಎಂಬ ಪ್ರಶ್ನೆ ಮಾಡಿದರು. “ಮತದಾರರ ಪಟ್ಟಿಯಲ್ಲಿ ಅಕ್ರಮ ವಲಸಿಗರ ಹೆಸರುಗಳು ಅಳಿಸಿಬಿಡಲಾಗುವುದೇ ಎಂಬುದೇ ಅವರಿಗೆ ದೊಡ್ಡ ಭಯ,” ಎಂದು ಅವರು ವ್ಯಂಗ್ಯವಾಡಿದರು.
ಅಮಿತ್ ಶಾ ತಮ್ಮ ಮಾತಿನಲ್ಲಿ ವಿರೋಧ ಪಕ್ಷದ ‘ಎರಡು ಮಾನದಂಡ’ ಗಳನ್ನು ಪ್ರಶ್ನಿಸಿದರು. “ನೀವು ಗೆದ್ದಾಗ ಮತದಾರರ ಪಟ್ಟಿಗಳು ಸರಿಯಾಗಿವೆ ಎಂದು ಹೇಳುತ್ತೀರಿ, ಹೊಸ ಬಟ್ಟೆಗಳನ್ನು ಧರಿಸಿ ಪ್ರಮಾಣವಚನ ಸ್ವೀಕರಿಸುತ್ತೀರಿ. ಆದರೆ ಸೋತ ಕೂಡಲೇ ಮತಪಟ್ಟಿ ತಪ್ಪಾಗಿದೆ ಎಂದು ಕೂಗುತ್ತೀರಿ. ಇದಕ್ಕೆ ಏನು ಅರ್ಥ?” ಎಂದು ಲೇವಡಿ ಮಾಡಿದರು.
ರಾಹುಲ್ ಗಾಂಧಿಯವರು ಮಾಡುವ ಆರೋಪಗಳೇ ಮೊದಲ ಬಾರಿಗೆ ಕೇಳುವಂತಿರುವುದಿಲ್ಲ ಎಂದು ಅಮಿತ್ ಶಾ ಹೇಳಿದರು. “ವಿರೋಧ ಪಕ್ಷದ ನಾಯಕ ಮತ ಕಳ್ಳತನದ ಬಗ್ಗೆ ಮಾತನಾಡಿದ್ದಾರೆ. ಆದರೆ, ನೆಹರು, ಇಂದಿರಾ ಮತ್ತು ಸೋನಿಯಾ ಗಾಂಧಿಯ ಕಾಲದಿಂದಲೂ ಕಳ್ಳತನ ನಡೆದಿದ್ದುದು ಅವರೇ ಗೊತ್ತಿರುವ ಸಂಗತಿ,” ಎಂದು ಅವರು ಗಂಭೀರ ಆರೋಪ ಮಾಡಿದರು.
ಸ್ವತಂತ್ರ ಭಾರತದ ಮೊದಲ ಪ್ರಧಾನಿಯನ್ನು ಆರಿಸುವ ಸಂದರ್ಭದಲ್ಲೇ ‘ವೋಟು ದೋಚಿಕೆ’ ಆರಂಭವಾಯಿತು ಎಂದು ವಿವರಿಸಿದ ಅವರು, ಕಾಂಗ್ರೆಸ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸಂಭವಿಸಿದ ಪ್ರಸಂಗವೊಂದನ್ನು ಚರ್ಚಿಸಿದರು. ಪಂಗಡಗಳ ಮುಖ್ಯಸ್ಥರು ತಲಾ ಒಂದು ಮತಗಳನ್ನು ಹಾಕಬೇಕಿದ್ದ ಸಂದರ್ಭದಲ್ಲಿ 28 ಮಂದಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಬೆಂಬಲಿಸಿದರೂ, ಕೇವಲ 2 ಮತಗಳು ಮಾತ್ರ ಜವಾಹರಲಾಲ್ ನೆಹರು ಪರವಾಗಿ ಚಲಾವಣೆಯಾದವು. ಇಂತಹ ಪರಿಸ್ಥಿತಿಯಲ್ಲಿಯೇ ನೆಹರು ಅವರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಲಾಯಿತು ಎಂಬುದನ್ನು ಅಮಿತ್ ಶಾ ತೀವ್ರವಾಗಿ ಪ್ರಶ್ನಿಸಿದರು. ಈ ಆರೋಪಗಳು ಕೇಳಿ ಬರುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ದನಿಯೆತ್ತಿ ವಿರೋಧ ವ್ಯಕ್ತಪಡಿಸಿದರು.
ಅಮಿತ್ ಶಾ ಮಾತಿನ ಕೊನೆಯಲ್ಲಿ, ಮತದಾರರ ಪಟ್ಟಿಯ ಶುದ್ಧೀಕರಣಕ್ಕೆ ಸರ್ಕಾರ ಬದ್ಧವಾಗಿದ್ದು, ವಿಶೇಷ ತೀವ್ರ ಪರಿಷ್ಕರಣೆ ಮೂಲಕ ಯಾವುದೇ ಅಕ್ರಮ ಹೆಸರುಗಳನ್ನು ಅಳಿಸಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲಾಗುವುದು ಎಂದರು. ಕಾನೂನುಬದ್ಧ ವಿಧಾನಗಳ ಮೂಲಕ ಮಾಡಿದ ಪರಿಷ್ಕರಣೆಗಳನ್ನು ವಿರೋಧ ಪಕ್ಷಗಳು ‘ಮತ ಕಳ್ಳತನ’ ಎಂದು ಬಣ್ಣಿಸುವುದು ಜನರನ್ನು ದಾರಿತಪ್ಪಿಸಲು ಮಾಡಿದ ಪ್ರಯತ್ನ ಎಂದು ಆರೋಪಿಸಿದರು.





