ನವದೆಹಲಿ: ತಮಿಳುನಾಡಿನ ತಿರುಪಾರಂಕುಂದ್ರಂ ಬೆಟ್ಟದ ಸುತ್ತಮುತ್ತಲಿನ ವಿವಾದ ಈಗ ರಾಷ್ಟ್ರಮಟ್ಟದ ಚರ್ಚೆಯಾಗಿ ಮಾರ್ಪಟ್ಟಿದೆ. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ ಒಕ್ಕೂಟದ ಸುಮಾರು 100ಕ್ಕೂ ಹೆಚ್ಚು ಲೋಕಸಭಾ ಸದಸ್ಯರು ಪದಚ್ಯುತಿ ಆಗ್ರಹಿಸಿ ಸಹಿ ಸಂಗ್ರಹಿಸಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಮೂಲ ಕಾರಣ ಅವರ ನೀಡಿದ ಒಂದು ತೀರ್ಪು, ಅದು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆಯಾಗಿದೆ ಎಂಬ ಆರೋಪ.
ತಿರುಪಾರಂಕುಂದ್ರಂ ಬೆಟ್ಟವು ಮದುರೈ ಬಳಿಯ ಪುಣ್ಯಕ್ಷೇತ್ರ. ಇದನ್ನು ದಕ್ಷಿಣ ಅಯೋಧ್ಯೆ ಎಂದು ಕರೆಯಲಾಗುತ್ತದೆ. ಬೆಟ್ಟದಲ್ಲಿ ಮುರುಗನ್ ಸ್ವಾಮಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನಗಳಿವೆ. ತುದಿಯಲ್ಲಿ ಸಿಕಂದರ್ ದರ್ಗಾ ಇದೆ. ಶತಮಾನಗಳಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಭಾವೈಕ್ಯತೆಯಿಂದ ಇಲ್ಲಿನ ಆಚರಣೆಗಳಲ್ಲಿ ಭಾಗಿಯಾಗುತ್ತವೆ. ಪ್ರತಿ ಕಾರ್ತಿಕ ಮಾಸದಲ್ಲಿ ದೀಪಾರಾಧನೆ ನಡೆಯುತ್ತದೆ. ಸಾಂಪ್ರದಾಯಿಕವಾಗಿ ಇದು ಮುರುಗನ್ ಮತ್ತು ಕಾಶಿ ವಿಶ್ವನಾಥ ದೇವಸ್ಥಾನಗಳ ನಡುವಿನ ದೀಪ ಮಂಟಪಂನಲ್ಲಿ ನಡೆಯುತ್ತದೆ.
ಆದರೆ, ಹಿಂದೂ ಕಾರ್ಯಕರ್ತ ರಾಮ ರವಿಕುಮಾರ್ ಅವರು ಮದುರೈ ಪೀಠಕ್ಕೆ ಅರ್ಜಿ ಸಲ್ಲಿಸಿ, ದೀಪಾರಾಧನೆಯನ್ನು ಬೆಟ್ಟದ ತುಟ್ಟ ತುದಿಯಲ್ಲಿ ನಡೆಸಬೇಕು ಎಂದು ಕೋರಿದರು. ನ್ಯಾ. ಸ್ವಾಮಿನಾಥನ್ ಅವರು ಇದಕ್ಕೆ ಅನುಮತಿ ನೀಡಿದರು. ಇದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ವಿರೋಧಿಗಳು ಹೇಳುತ್ತಾರೆ. ಡಿಎಂಕೆ ಸರ್ಕಾರ ಈ ಆದೇಶವನ್ನು ಪಾಲಿಸದೆ ಹಳೆಯ ಸ್ಥಳದಲ್ಲೇ ದೀಪೋತ್ಸವ ನಡೆಸಿತು. ಇದರಿಂದ ಕೆರಳಿದ ರವಿಕುಮಾರ್ ಮತ್ತೆ ನ್ಯಾಯಾಲಯದ ಮೊರೆ ಹೋದರು.
ನ್ಯಾಯಪೀಠವು ಆದೇಶ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ, ರವಿಕುಮಾರ್ ಅವರಿಗೆ ಬೆಟ್ಟದ ಮೇಲೆ ದೀಪ ಹಚ್ಚಲು ಸೂಚಿಸಿತ್ತು. ಅವರ ಭದ್ರತೆಗಾಗಿ ಸಿಐಎಸ್ಎಫ್‌ನ 10 ಸಿಬ್ಬಂದಿಯನ್ನು ನಿಯೋಜಿಸಿತ್ತು. ಆದರೆ, ಡಿಎಂಕೆ ಸರ್ಕಾರ ಚೆನ್ನೈ ಮುಖ್ಯಪೀಠಕ್ಕೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆಯಿತು. ಇದರಿಂದ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಯಿತು. ಜಿಲ್ಲಾಧಿಕಾರಿ ರವಿಕುಮಾರ್ ಅವರನ್ನು ಬೆಟ್ಟ ಹತ್ತದಂತೆ ತಡೆದರು.
ಈ ಹಿನ್ನೆಲೆ ಫೆಬ್ರುವರಿಯಲ್ಲಿ ಮುಸ್ಲಿಂ ಮುಖಂಡರು ಬೆಟ್ಟದ ಹೆಸರನ್ನು ಸಿಕಂದರ್ ಮಲೈ ಎಂದು ಬದಲಾಯಿಸುವಂತೆ ಮನವಿ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಯಿತು. 1923ರಲ್ಲಿ ಬ್ರಿಟಿಷ್ ಕಾಲದ ತೀರ್ಪು ಬೆಟ್ಟವನ್ನು ಮುರುಗನ್ ದೇವಸ್ಥಾನಕ್ಕೆ ಸೇರಿದ್ದು ಎಂದು ಹೇಳಿತ್ತು. ಆದರೂ, ಸ್ಥಳೀಯರು ಭಾವೈಕ್ಯತೆಯಿಂದ ಇದ್ದರು. ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಅಮಿತ್ ಶಾ ಅವರಿಗೂ ವಿಚಾರ ತಲುಪಿತ್ತು. ಬಿಜೆಪಿ ಮುರುಗನ್ ಮಹಾಸಭಾ ನಡೆಸಿ ಧರ್ಮಜಾಗೃತಿ ಮೂಡಿಸಲು ಪ್ರಯತ್ನಿಸಿತ್ತು.
ಇತ್ತೀಚೆಗೆ ಬೆಟ್ಟದ ತುದಿಯಲ್ಲಿ ಮುಸ್ಲಿಮರು ಮಾಂಸಾಹಾರ ಸೇವಿಸಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಯಿತು. ಬಲಪಂಥೀಯರು ಇದನ್ನು ದೇವರ ಅಪವಿತ್ರತೆ ಎಂದು ಕರೆದರು. ಅಕ್ಟೋಬರ್‌ನಲ್ಲಿ ನ್ಯಾಯಾಲಯವು ದರ್ಗಾ ಮುಂದೆ ಪ್ರಾಣಿ ಬಲಿ ನಿಷೇಧಿಸಿತ್ತು.
ಇಂಡಿಯಾ ಬ್ಲಾಕ್, ನ್ಯಾ. ಸ್ವಾಮಿನಾಥನ್ ಅವರು ಮತೀಯ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳದೆ ತೀರ್ಪು ನೀಡಿದ್ದಾರೆ ಎಂದು ಆರೋಪಿಸಿದೆ. ಇದು ಭಾವೈಕ್ಯತೆಗೆ ಧಕ್ಕೆಯಾಗಿದೆ. ಸ್ಥಳೀಯರು ತಮ್ಮ ನಡುವೆ ಭೇದಭಾವವಿಲ್ಲ ಎಂದು ಹೇಳುತ್ತಾರೆ. ಆದರೆ, ರಾಜಕೀಯ ಮತ್ತು ಧಾರ್ಮಿಕ ಗುಂಪುಗಳು ವಿವಾದವನ್ನು ಉಲ್ಬಣಗೊಳಿಸಿವೆ. ಈ ಪ್ರಕರಣ ಧಾರ್ಮಿಕ ಸಾಮರಸ್ಯ ಮತ್ತು ನ್ಯಾಯಾಂಗದ ಪಾತ್ರದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.





