ಪಾಕಿಸ್ತಾನದ ಕರಾಚಿಯ ನಿವಾಸಿ ನಿಕಿತಾ ನಾಗದೇವ್ ಎಂಬ್ಬಿಸಿರುವ ಆರೋಪಗಳು ಭಾರತ-ಪಾಕ್ ಗಡಿಯಾಚೆಗಿನ ವೈವಾಹಿಕ ವಿವಾದಕ್ಕೆ ಮತ್ತೊಮ್ಮೆ ಬೆಳಕು ಚೆಲ್ಲಿವೆ. ತನ್ನ ಪತಿ ವಿಕ್ರಮ್ ನಾಗದೇವ್ ತನ್ನನ್ನು ತ್ಯಜಿಸಿ, ಈಗ ದೆಹಲಿಯಲ್ಲಿ ರಹಸ್ಯವಾಗಿ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿರುವ ನಿಕಿತಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವನಾತ್ಮಕ ವೀಡಿಯೊ ಮಾಡಿ ಮನವಿ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ನಿಕಿತಾ ಅವರ ಪ್ರಕಾರ, 2020 ಜನವರಿ 26ರಂದು ಕರಾಚಿಯಲ್ಲಿ ಹಿಂದೂ ರೀತಿಯಂತೆ ವಿಕ್ರಮ್ ನಾಗದೇವ್ ಅವರೊಂದಿಗೆ ಮದುವೆಯಾಗಿದ್ದರು. ದೀರ್ಘಾವಧಿ ವೀಸಾದಲ್ಲಿ ಇಂದೋರ್‌ನಲ್ಲಿ ವಾಸಿಸುತ್ತಿದ್ದ ವಿಕ್ರಮ್, ಮದುವೆಯ ಒಂದು ತಿಂಗಳಲ್ಲೇ (ಫೆಬ್ರವರಿ 26, 2020) ಅವರನ್ನು ಭಾರತಕ್ಕೆ ಕರೆತಂದರು. ಆದರೆ ಕೇವಲ ಕೆಲವು ತಿಂಗಳಲ್ಲೇ ಸಂಬಂಧದಲ್ಲಿ ಬಿರುಕು ಉಂಟಾಯಿತು.
“ವೀಸಾ ಸಮಸ್ಯೆ ಇದೆ ಎಂಬ ನೆಪದಲ್ಲಿ 2020 ಜುಲೈ 9ರಂದು ಅಟ್ಟಾರಿ ಗಡಿಯಲ್ಲಿ ನನ್ನನ್ನು ಬಿಟ್ಟು, ಪಾಕಿಸ್ತಾನಕ್ಕೆ ಹಿಂದಿರುಗು ಎಂದು ಒತ್ತಾಯಿಸಿದರು. ಅಂದಿನಿಂದ ಇಂದಿನವರೆಗೆ ನನ್ನನ್ನು ಮರಳಿ ಕರೆತರಲು ಯಾವ ಪ್ರಯತ್ನವೂ ಮಾಡಿಲ್ಲ” ಎಂದು ನಿಕಿತಾ ಕಣ್ಣೀರಿಟ್ಟು ಹೇಳಿದ್ದಾರೆ.
“ಈಗ ಅವರು ದೆಹಲಿಯಲ್ಲಿ ರಹಸ್ಯವಾಗಿ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ನಾನು ಇನ್ನೂ ಕಾನೂನುಬದ್ಧವಾಗಿ ಅವರ ಪತ್ನಿ. ದಯವಿಟ್ಟು ನನ್ನ ಪತಿಯ ಈ ರಹಸ್ಯ ಮದುವೆಯನ್ನು ನಿಲ್ಲಿಸಿ. ನನಗೆ ನ್ಯಾಯ ಕೊಡಿಸಿ” ಎಂದು ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮನವಿ ಮಾಡಿಕೊಂಡಿದ್ದಾರೆ.
ನಿಕಿತಾ ತಮ್ಮ ವೀಡಿಯೊದಲ್ಲಿ ಮತ್ತಷ್ಟು ಭಾವುಕವಾಗಿ ಮಾತನಾಡುತ್ತಾ, “ಇಂದು ನನಗೆ ನ್ಯಾಯ ಸಿಗದಿದ್ದರೆ, ಭಾರತೀಯ ನ್ಯಾಯವ್ಯವಸ್ಥೆಯ ಮೇಲಿನ ನಂಬಿಕೆಯೇ ಕಳೆದುಕೊಳ್ಳುತ್ತೇವೆ. ಲಕ್ಷಾಂತರ ಮಹಿಳೆಯರು ಮನೆಯಲ್ಲಿಯೇ ಕಿರುಕುಳ ಅನುಭವಿಸುತ್ತಿದ್ದಾರೆ. ನನ್ನೊಂದಿಗೆ ನಿಂತು ನ್ಯಾಯ ಕೇಳಿ” ಎಂದು ಕೋರಿದ್ದಾರೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದ್ದು, ಭಾರತ-ಪಾಕಿಸ್ತಾನ ಗಡಿಯಾಚೆಗಿನ ವೈವಾಹಿಕ ಸಮಸ್ಯೆಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಇಂತಹ ಪ್ರಕರಣಗಳು ಹಿಂದೆಯೂ ಬಂದಿರುವುದರಿಂದ, ಈ ಬಾರಿ ನಿಕಿತಾ ಅವರಿಗೆ ನ್ಯಾಯ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.





