ಚಳಿಗಾಲದ ಆಗಮನದೊಂದಿಗೆ, ಅನೇಕ ಜನರು ತೂಕ ಹೆಚ್ಚಳದ (Weight Gain) ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮೈಕೊರೆವ ಚಳಿಯಿಂದಾಗಿ ದೈಹಿಕ ಚಟುವಟಿಕೆಯಿಂದ ದೂರವಿರುವುದು ಸಾಮಾನ್ಯ. ನಾವು ಬಹುತೇಕ ಸಮಯವನ್ನು ಬೆಚ್ಚನೆಯ ಹಾಸಿಗೆಯಲ್ಲಿ, ಮನೆಯೊಳಗೆ ಅಥವಾ ಕಚೇರಿಯಲ್ಲಿ ಕುಳಿತೇ ಕೆಲಸದಲ್ಲಿ ತೊಡಗಿರುತ್ತಾರೆ. ಶೀತದ ತೀವ್ರತೆ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯದ (Air Pollution) ಕಾರಣದಿಂದಾಗಿ, ಹೊರಗೆ ಹೋಗುವುದು ಮತ್ತು ವಾಕಿಂಗ್ (Walking) ಅಥವಾ ಓಟದಂತಹ ವ್ಯಾಯಾಮಗಳನ್ನು ಮಾಡುವುದು ಕಡಿಮೆಯಾಗುತ್ತದೆ. ಈ ಕಡಿಮೆ ಚಟುವಟಿಕೆ ಮತ್ತು ಬದಲಾದ ಜೀವನಶೈಲಿಯೇ ಚಳಿಗಾಲದಲ್ಲಿ ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ.
ವ್ಯಾಯಾಮಕ್ಕೆ ಸಮಯ ಸಿಗುತ್ತಿಲ್ಲ ಜೊತೆಗೆ ಮನೆಯ ಕೆಲಸ ಮತ್ತು ಕಚೇರಿ ಒತ್ತಡದ ನಡುವೆ ಹಲವಾರುನ ಜನ ಸಿಲುಕಿಕೊಂಡು ಈ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಒಳ್ಳೆಯ ಸುದ್ದಿ ಏನೆಂದರೆ, ನೀವು ದೀರ್ಘಕಾಲದ ವ್ಯಾಯಾಮಗಳಿಲ್ಲದೆ ಕೇವಲ ನಿಮ್ಮ ಆಹಾರ ಪದ್ಧತಿಗಳನ್ನು (Dietary Habits) ಬದಲಾಯಿಸುವ ಮೂಲಕವೂ ಚಳಿಗಾಲದಲ್ಲಿ ನಿಮ್ಮ ತೂಕವನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿ ಇರಿಸಬಹುದು. ವ್ಯಾಯಾಮ ಮಾಡದೆಯೇ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಸರಳ ಮತ್ತು ಪ್ರಮುಖ ಆಹಾರದ ಅಂಶಗಳು ಇಲ್ಲಿವೆ.
1. ಪ್ರೋಟೀನ್ ಸಮತೋಲನವನ್ನು ಕಾಪಾಡಿ
ತೂಕ ನಿಯಂತ್ರಣದಲ್ಲಿ ಪ್ರೋಟೀನ್ (Protein) ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆಹಾರದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ಅನ್ನು ಸೇವಿಸುವುದರಿಂದ, ಅದು ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದು ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ, ನಾವು ಅನಗತ್ಯವಾದ ಅಥವಾ ಹೆಚ್ಚುವರಿ ಕ್ಯಾಲೊರಿಗಳನ್ನು (Calories) ಸೇವಿಸುವುದನ್ನು ಕಡಿಮೆ ಮಾಡುತ್ತೇವೆ ಮತ್ತು ತೂಕವು ನಿಯಂತ್ರಣದಲ್ಲಿರುತ್ತದೆ. ಹೊಟ್ಟೆ ತುಂಬಿದಾಗ ಅನಗತ್ಯ ಸ್ನ್ಯಾಕ್ಸ್‌ಗಳ ಕಡೆ ಗಮನ ಹೋಗುವುದಿಲ್ಲ, ಇದರಿಂದಾಗಿ ಕೊಬ್ಬು (Fat) ಶೇಖರಣೆಯಾಗುವುದು ಕಡಿಮೆಯಾಗುತ್ತದೆ. ಮೊಟ್ಟೆ, ಕಾಳುಗಳು, ಕೋಳಿ ಮಾಂಸ, ಮೀನು ಮತ್ತು ಡೈರಿ ಉತ್ಪನ್ನಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
2. ಆರೋಗ್ಯಕರ ಆಹಾರ ಸೇವನೆಗೆ ಆದ್ಯತೆ
ತೂಕ ಇಳಿಸಿಕೊಳ್ಳಲು ಆಹಾರ ಸೇವನೆಯ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡುವುದು ಅನಿವಾರ್ಯವಲ್ಲ. ಬದಲಾಗಿ, ನೀವು ಸೇವಿಸುವ ಆಹಾರದ ಗುಣಮಟ್ಟಕ್ಕೆ ಗಮನ ಕೊಡುವುದು ಬಹಳ ಮುಖ್ಯ. ತೂಕ ಇಳಿಸಿಕೊಳ್ಳಲು ಮತ್ತು ನಿಯಂತ್ರಿಸಲು ಆರೋಗ್ಯಕರವಾದ ಆಹಾರವನ್ನೇ ಸೇವಿಸಬೇಕು. ಸಂಸ್ಕರಿಸಿದ ಆಹಾರಗಳು (Processed Foods), ಸಕ್ಕರೆ ಪದಾರ್ಥಗಳು ಮತ್ತು ಹೆಚ್ಚು ಎಣ್ಣೆಯುಕ್ತ ಆಹಾರಗಳಿಂದ ದೂರವಿರಿ. ಹೆಚ್ಚು ನಾರಿನಾಂಶ (Fiber) ಮತ್ತು ಕಡಿಮೆ ಸಕ್ಕರೆ ಇರುವಂತಹ ನೈಸರ್ಗಿಕ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ.
3. ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳ ಸೇವನೆ
ನಿಮ್ಮ ದಿನವನ್ನು ಪೋಷಕಾಂಶಗಳ (Nutrients) ಉತ್ತಮ ಆಹಾರದೊಂದಿಗೆ ಪ್ರಾರಂಭಿಸಿ. ಅಂದರೆ, ನಿಮ್ಮ ಬೆಳಗಿನ ಉಪಾಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವುದನ್ನು ರೂಢಿಸಿಕೊಳ್ಳಿ. ಹಣ್ಣುಗಳು ಮತ್ತು ತರಕಾರಿಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ, ಇದು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಡಿಮೆಯಾಗುವ ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ಲಘು ಉಪಹಾರ ಮಾಡಬೇಕೆಂದರೆ, ವಿವಿಧ ಬಗೆಯ ಹಣ್ಣುಗಳಿಂದ ತಯಾರಿಸಿದ ಚಾಟ್ಸ್ ಅಥವಾ ಸ್ಮೂಥಿ (Smoothie) ಸೇವಿಸಬಹುದು. ಇದು ವಿಟಮಿನ್‌ಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
4. ಅಗಿದು ನಿಧಾನವಾಗಿ ತಿನ್ನಿರಿ
ಆಹಾರ ಸೇವನೆಯ ವೇಗವು ತೂಕ ಹೆಚ್ಚಳಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಆತುರದಿಂದ ಊಟ ಅಥವಾ ಉಪಾಹಾರ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಆಹಾರವನ್ನು ಚೆನ್ನಾಗಿ ಅಗಿಯಿರಿ ಮತ್ತು ನಿಧಾನವಾಗಿ ತಿನ್ನಿರಿ. ಆಹಾರವನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಹೊಟ್ಟೆಯು ಅದನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ ಮತ್ತು ಪೋಷಕಾಂಶಗಳು ಸರಿಯಾಗಿ ಹೀರಲ್ಪಡುತ್ತವೆ. ಮುಖ್ಯವಾಗಿ, ನಾವು ಬೇಗ ಬೇಗ ತಿನ್ನುವ ಸಂದರ್ಭದಲ್ಲಿ, ನಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎಂಬ ಸಂಕೇತ ತಲುಪುವ ಮೊದಲೇ ಅತಿಯಾಗಿ ಊಟ ಮಾಡಿಬಿಡುತ್ತೇವೆ. ಇದರಿಂದ ಸಹಜವಾಗಿಯೇ ಕ್ಯಾಲೊರಿ ಸೇವನೆ ಹೆಚ್ಚಾಗಿ ತೂಕ ಹೆಚ್ಚಾಗುತ್ತದೆ. ನಿಧಾನವಾಗಿ ತಿನ್ನುವ ಅಭ್ಯಾಸವು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
ಈ ಸರಳ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡರೆ, ಮೈಕೊರೆವ ಚಳಿಯಲ್ಲಿ ಕಷ್ಟಕರವಾದ ವ್ಯಾಯಾಮಗಳಿಲ್ಲದೆ ಸಹ ನಿಮ್ಮ ತೂಕವನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿ ಇಡಬಹುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬಹುದು.





