ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ರೋಚಕತೆಯಿಂದ ಕೂಡಿತ್ತು. ಆದರೆ ಆಟದ ಉತ್ಸಾಹದ ನಡುವೆಯೇ ದೊಡ್ಡ ದುರಂತ ನಡೆದಿದೆ. ಸ್ಪಂದನಾ ಸೋಮಣ್ಣ ಅವರಿಗೆ ಕಾಲಿಗೆ ಗಾಯವಾಗಿದೆ. ಇದೇ ವೇಳೆ ಗಿಲ್ಲಿ ನಟನ ಕಾಮಿಡಿ ಟೈಮಿಂಗ್ ಮನೆಯ ಎಲ್ಲರನ್ನೂ ನಗಿಸಿದ್ದಾನೆ.
ಈ ಬಾರಿಯ ಕ್ಯಾಪ್ಟನ್ಸಿ ಟಾಸ್ಕ್ ಜೋಡಿಗಳ ಆಧಾರದ ಮೇಲೆ ನಡೆಯುತ್ತಿದೆ. ಮನೆಯಲ್ಲಿದ್ದ ಸ್ಪರ್ಧಿಗಳನ್ನು ಈ ಕೆಳಗಿನ ಜೋಡಿಗಳನ್ನಾಗಿ ಮಾಡಲಾಗಿತ್ತು. ಕಾವ್ಯ – ಗಿಲ್ಲಿ, ರಾಶಿಕಾ – ಸೂರಜ್, ಸ್ಪಂದನಾ – ಅಭಿಷೇಕ್, ಅಶ್ವಿನಿ – ರಘು, ಮಾಳು – ರಕ್ಷಿತಾ, ಚೈತ್ರಾ ಕುಂದಾಪುರ – ರಜತ್ ಕಿಶನ್ ಜೋಡಿಗಳಾಗಿದ್ದರು.
ಟಾಸ್ಕ್‌ನ ಮೊದಲ ಹಂತದಲ್ಲಿ ‘ಬಾಲ್ ಸಂಗ್ರಹ’ ಆಟ ನಡೆಯಿತು. ಇದರಲ್ಲಿ ಎಲ್ಲ ಜೋಡಿಗಳು ಒಟ್ಟಿಗೆ ಓಡಾಡಿ, ಗೂಡು ಸೇರಿಸಬೇಕಿದ್ದ ಬಾಲ್‌ಗಳನ್ನು ರಕ್ಷಿಸಿಕೊಳ್ಳಬೇಕು, ಎದುರಾಳಿಗಳಿಂದ ಕಸಿದುಕೊಳ್ಳಬೇಕು. ಆಟ ತೀವ್ರ ಸ್ಪರ್ಧಾತ್ಮಕವಾಗಿ ನಡೆದಿದ್ದರಿಂದ ಎಲ್ಲರೂ ಒಬ್ಬರ ಮೇಲೊಬ್ಬರು ಬೀಳುತ್ತಾ, ತಳ್ಳಾಟ-ನೂಕಾಟ ನಡೆಯಿತು.
ಈ ವೇಳೆ ನಡುವೆ ಸ್ಪಂದನಾ ಕೆಳಗೆ ಬಿದ್ದರು. ಅಭಿಷೇಕ್ ತಮ್ಮ ಕೈಯಲ್ಲಿದ್ದ ಬಾಲ್ ರಕ್ಷಿಸಿಕೊಳ್ಳಲು ನಿಂತಿದ್ದು, ಸ್ಪಂದನಾರನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದಂತೆಯೇ ಇತರ ಸ್ಪರ್ಧಿಗಳು ಅವರ ಮೇಲೆಯೇ ಬಿದ್ದರು. ಇಡೀ ತೂಕ ಸ್ಪಂದನಾ ಅವರ ಬಲಗಾಲಿನ ಮೇಲೆ ಬಿದ್ದಿತ್ತು. ತಕ್ಷಣ ಕೂಗಾಟ ಆರಂಭವಾಯಿತು. ಸ್ಪಂದನಾ ನೋವಿನಿಂದ ಕಣ್ಣೀರು ಹಾಕುತ್ತಾ ಕೂಗಿದರು.
ಬಿಗ್‌ಬಾಸ್ ತಕ್ಷಣ ವೈದ್ಯಕೀಯ ತಂಡವನ್ನು ಕರೆಸಿ, ಸ್ಪಂದನಾ ಅವರನ್ನು ಕಾನ್ಫೆಷನ್ ರೂಮ್‌ಗೆ ಕರೆದೊಯ್ಯಲಾಯಿತು. ಪರೀಕ್ಷೆಯ ನಂತರ ಡಾಕ್ಟರ್ ದೃಢಪಡಿಸಿದ್ದು, ಕಾಲಿನಲ್ಲಿ ಫ್ರಾಕ್ಚರ್ ಆಗಿದೆ!. ಕಾಲಿಗೆ ಪ್ಲಾಸ್ಟರ್ (ಬೆಲ್ಟ್) ಹಾಕಿ, ಸಂಪೂರ್ಣ ತೂಕ ಹಾಕದಂತೆ ಸೂಚಿಸಲಾಯಿತು. ಆ ನಂತರ ಸ್ಪಂದನಾ ಮನೆಗೆ ಮರಳಿದರು.
ಆದರೆ ಮನೆಯಲ್ಲಿ ಅಭಿಷೇಕ್ ಸಹಾಯದಿಂದ ಸ್ಪಂದನಾ ಕುಂಟುತ್ತಾ ನಡೆಯುತ್ತಿದ್ದಂತೆ ಗಿಲ್ಲಿ ಒಳಗೆ ಬಂದರು. ಪುಷ್ಪ ಸಿನಿಮಾದ ಅಲ್ಲು ಅರ್ಜುನ್‌ನ ಕಾಲೆಳೆದುಕೊಂಡು ನಡೆಯುವ ಸ್ಟೈಲ್ ಅದೇ ರೀತಿ ಮಾಡಿ ತೋರಿಸಿದರು. ಗಿಲ್ಲಿಯ ಈ ಕಾಮಿಡಿ ಟೈಮಿಂಗ್‌ಗೆ ಸ್ಪಂದನಾ ಸ್ವತಃ ನಗುತ್ತಿದ್ದು, ಉಳಿದ ಸ್ಪರ್ಧಿಗಳು ಕೈತಟ್ಟಿ ನಕ್ಕರು.
ಅಷ್ಟೇ ಅಲ್ಲ, ಬಿಗ್‌ಬಾಸ್ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಇನ್ನೊಂದು ಮುದ್ದಾದ ದೃಶ್ಯವಿದೆ. ಸ್ಪಂದನಾ ಕಣ್ಣೀರು ಹಾಕುತ್ತಾ ಕುಳಿತಾಗ ಧನುಷ್, ಅಭಿಷೇಕ್, ಸೂರಜ್ ಮೂವರು ಸ್ಪಂದನಾ ಅವರೇ ರೀತಿ ಕುಂಟುತ್ತಾ ಕುಣಿದು ಅವರನ್ನ ನಗಿಸುವ ಪ್ರಯತ್ನ ಮಾಡಿದ್ದಾರೆ. ಈ ದೃಶ್ಯ ಕೂಡ ಈಗ ವೈರಲ್ ಆಗುತ್ತಿದೆ.
ಈ ನಡುವೆ ಟಾಸ್ಕ್ ಮುಂದುವರಿದಿದೆ. ಮೊದಲ ರೌಂಡ್‌ನಲ್ಲಿ ರಘು-ಅಶ್ವಿನಿ ಜೋಡಿ ಗೆದ್ದಿದೆ. ಬಿಗ್‌ಬಾಸ್ ನೀಡಿದ ಅಧಿಕಾರದಂತೆ ಈ ಜೋಡಿ ಈಗ ಒಂದು ಜೋಡಿಯನ್ನು ಸಂಪೂರ್ಣವಾಗಿ ಟಾಸ್ಕ್‌ನಿಂದ ಹೊರಹಾಕಬೇಕಿದೆ. ಯಾರ ಹೆಸರು ಘೋಷಣೆಯಾಗಲಿದೆ? ಸ್ಪಂದನಾ-ಅಭಿಷೇಕ್ ಜೋಡಿ ಗಾಯದ ಕಾರಣಕ್ಕಾಗಿ ಟಾರ್ಗೆಟ್ ಆಗುತ್ತಾರಾ? ಅಥವಾ ಬೇರೆ ಯಾರನ್ನಾದರೂ ಆಯ್ಕೆ ಮಾಡುತ್ತಾರಾ? ಇದು ಈಗ ಮನೆಯಲ್ಲಿ ದೊಡ್ಡ ಕುತೂಹಲ.





