ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ಹೊಸ ಸ್ಮಾರ್ಟ್‌ಫೋನ್‌ನಲ್ಲೂ ಕೇಂದ್ರ ಸರ್ಕಾರದ ‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯವಾಗಿ ಪ್ರಿ-ಲೋಡ್ ಆಗಿರಬೇಕು ಎಂದು ದೂರಸಂಪರ್ಕ ಇಲಾಖೆ ನವೆಂಬರ್ 28 ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ಫೋನ್ ಮೊದಲ ಬಾರಿಗೆ ಆನ್ ಮಾಡುವಾಗಲೇ ಆ್ಯಪ್ ಗೋಚರಿಸಬೇಕು, ಬಳಕೆದಾರನಿಗೆ ಅದನ್ನು ಅನ್‌ಇನ್‌ಸ್ಟಾಲ್ ಮಾಡುವ ಆಯ್ಕೆಯೇ ಇರಬಾರದು. ಈಗಾಗಲೇ ಬಳಕೆಯಲ್ಲಿರುವ ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಈ ಆ್ಯಪ್ ಹಾಕಲಾಗುವುದು ಎಂದು ಸೂಚಿಸಲಾಗಿದೆ.
‘ಸಂಚಾರ್ ಸಾಥಿ’ ಆ್ಯಪ್ ಎಂದರೇನು?
ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ ಈ ಪೋರ್ಟಲ್ ಮತ್ತು ಆ್ಯಪ್ ಸೈಬರ್ ವಂಚನೆ ತಡೆಗೆ ಮತ್ತು ದೂರಸಂಪರ್ಕ ಭದ್ರತೆಗಾಗಿ ರೂಪಿತವಾಗಿದೆ.
ಇದರ ಮುಖ್ಯ ಉದ್ದೇಶಗಳು
- ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಅನ್ನು ತಕ್ಷಣ ಬ್ಲಾಕ್ ಮಾಡುವುದು
- ಫೋನ್ ದೇಶದ ಯಾವ ಭಾಗದಲ್ಲಿ ಸಕ್ರಿಯವಾಗಿದೆ ಎಂಬ ಮಾಹಿತಿ ಪೊಲೀಸರಿಗೆ ತಲುಪಿಸುವುದು
- ಖರೀದಿಗೆ ಮೊದಲು IMEI ಸಂಖ್ಯೆ ಸರಿಯಾದ್ದೇ ಎಂದು ಪರಿಶೀಲಿಸುವ ಸೌಲಭ್ಯ
- ಈವರೆಗೆ 42.14 ಲಕ್ಷಕ್ಕೂ ಹೆಚ್ಚು ಫೋನ್‌ಗಳನ್ನು ಬ್ಲಾಕ್ ಮಾಡಲಾಗಿದೆ. 26.11ಲಕ್ಷ ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಸಂಚಾರ್ ಸಾಥಿ ವೆಬ್‌ಸೈಟ್ ಹೇಳುತ್ತದೆ.
ಆದರೆ ಈ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸೈಬರ್ ವಂಚನೆ ತಡೆಗೆ ವ್ಯವಸ್ಥೆ ಬೇಕೇ ಬೇಕು. ಆದರೆ ಪ್ರತಿಯೊಂದು ಫೋನ್‌ನಲ್ಲೂ ಈ ಆ್ಯಪ್ ಕಡ್ಡಾಯವಾಗಿ ಅಳವಡಿಸಿ, ಅಳಿಸಲಾಗದಂತೆ ಮಾಡುವುದು ಬಳಕೆದಾರರ ಗೌಪ್ಯತೆಯ ಮೇಲೆ ನೇರ ದಾಳಿಯಾಗಿದೆ” ಎಂದು ಅವರು ಆರೋಪಿಸಿದ್ದಾರೆ. “ಇದು ಕೇವಲ ಒಂದು ಆ್ಯಪ್‌ನ ಪ್ರಶ್ನೆಯಲ್ಲ, ಬಿಜೆಪಿ ಸರ್ಕಾರ ದೇಶವನ್ನು ಸರ್ವಾಧಿಕಾರಿ ರಾಷ್ಟ್ರವನ್ನಾಗಿ ಪರಿವರ್ತಿಸುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕಿ ರೇಣುಕಾ ಚೌಧರಿ ಇನ್ನಷ್ಟು ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ. “ಅಳಿಸಲಾಗದ ಆ್ಯಪ್ ಅಳವಡಿಸುವ ಮೂಲಕ ಸರ್ಕಾರ ಪ್ರತಿ ನಾಗರಿಕನ ಚಲನವಲನ, ಸಂವಹನಗಳ ಮೇಲೆ ನಿರಂತರ ಕಣ್ಗಾವಲು ಇಡುವ ಪ್ರಯತ್ನ ಮಾಡುತ್ತಿದೆ. ಇದು ಸಂಸತ್ತಿನ ಮೇಲ್ವಿಚಾರಣೆ ಇಲ್ಲದೆಯೇ ನಾಗರಿಕರ ಮೇಲೆ ಗೂಢಚಾರಿಕೆ ಮಾಡುವಂತೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಸರ್ಕಾರ ಈ ಆದೇಶವನ್ನು ಸಂಪೂರ್ಣವಾಗಿ ಜನಪರ ಕ್ರಮ ಎಂದು ರಕ್ಷಿಸಿಕೊಳ್ಳುತ್ತಿದೆ. “ದಿನದಿಂದ ದಿನಕ್ಕೆ ಸೈಬರ್ ವಂಚನೆ ಹೆಚ್ಚಾಗುತ್ತಿದೆ. ಕಳೆದುಹೋದ ಫೋನ್‌ಗಳನ್ನು ದುರ್ಬಳಕೆ ಮಾಡಿಕೊಂಡು ಅಪರಾಧಿಗಳು ದೇಶದ ಯಾವ ಭಾಗದಲ್ಲಾದರೂ ತಲುಪುತ್ತಿದ್ದಾರೆ. ಈ ಆ್ಯಪ್ ನಾಗರಿಕರಿಗೆ ಭದ್ರತೆ ನೀಡುತ್ತದೆ” ಎಂದು ಅಧಿಕಾರಿಗಳು ವಾದಿಸುತ್ತಾರೆ.
ಆದರೆ ತಂತ್ರಜ್ಞರು ಮತ್ತು ಗೌಪ್ಯತಾ ಹೋರಾಟಗಾರರು ಈ ಆದೇಶದಲ್ಲಿ ದೊಡ್ಡ ಅಪಾಯ ಕಾಣುತ್ತಿದ್ದಾರೆ. “ಯಾವುದೇ ಸರ್ಕಾರಿ ಆ್ಯಪ್ ಅಳಿಸಲಾಗದಂತೆ ಇದ್ದರೆ, ಅದು ಹಿನ್ನೆಲೆಯಲ್ಲಿ ಏನೆಲ್ಲಾ ಮಾಹಿತಿ ಸಂಗ್ರಹಿಸುತ್ತದೆ ಎಂಬ ಗ್ಯಾರಂಟಿ ಇಲ್ಲ. ಇದೊಂದು ದೊಡ್ಡ ಬ್ಯಾಕ್‌ಡೋರ್ ಆಗಬಹುದು” ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.





