ನವದೆಹಲಿ: ಸಂಸತ್ ಭವನವು ಡ್ರಾಮಾ ಮಾಡುವ ವೇದಿಕೆ ಅಲ್ಲ, ರಾಷ್ಟ್ರದ ಹಿತಕ್ಕಾಗಿ ಚರ್ಚಿಸುವ ಪವಿತ್ರ ಸ್ಥಳ ಎಂದು ಚಳಿಗಾಲದ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಸೋಮವಾರ ಆರಂಭವಾದ ಅಧಿವೇಶನದ ಮೊದಲು ಮಾಧ್ಯಮಗಳಿಗೆ ಮಾತನಾಡಿದ ಅವರು, ದೇಶದ ಜನತೆ ಸಂಸತ್ತಿನಿಂದ ಅರ್ಥಪೂರ್ಣ ಚರ್ಚೆ, ಸಲಹೆಗಳು ಮತ್ತು ರಾಷ್ಟ್ರೀಯ ಹಿತದ ನಿರ್ಧಾರಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಿದರು.
“ಸಂಸತ್ ಭವನ ಡ್ರಾಮಾ ಮಾಡುವ ಸ್ಥಳವಲ್ಲ, ಸಾಧನೆ ಮಾಡುವ ಸ್ಥಳ” ಎಂದು ಆರಂಭದಲ್ಲೇ ಪ್ರಧಾನಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಚಳಿಗಾಲದ ಅಧಿವೇಶನವು ಕೇವಲ ಕಾನೂನು ರಚನೆಯ ಕಾರ್ಯಕ್ರಮ ಮಾತ್ರವಲ್ಲ, ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು, ಯಾವ ಗುರಿಯನ್ನು ಮುಟ್ಟಬೇಕು ಎಂಬುದನ್ನು ನಿರ್ಧರಿಸುವ ಮಹತ್ವದ ವೇದಿಕೆ ಎಂದು ಹೇಳಿದರು.
ಪ್ರಧಾನಿ ಈ ಬಾರಿ ವಿರೋಧ ಪಕ್ಷಗಳನ್ನು ನೇರವಾಗಿ ಗುರಿಯಾಗಿಸಿದರು. “ಕೆಲವು ಪಕ್ಷಗಳು ಇನ್ನೂ ತಮ್ಮ ಚುನಾವಣಾ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಸೋಲಿನ ಹತಾಶೆ, ಆ ಆಘಾತ ಸಂಸತ್ತಿನ ವಾತಾವರಣವಾಗಬಾರದು” ಎಂದು ತಿಳಿ ಹೇಳಿದರು. ಬಿಹಾರದ ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ, ಜನರ ತೀರ್ಪನ್ನು ಒಪ್ಪಿಕೊಂಡು ಚರ್ಚೆಗೆ ಬರಬೇಕೆಂದು ವಿರೋಧಿಗಳಿಗೆ ಸಲಹೆ ನೀಡಿದರು.
“ಈ ದೇಶದ ಜನತೆ ಯಾವಾಗಲೂ ಪ್ರಜಾಪ್ರಭುತ್ವವನ್ನು ಗೆಲ್ಲಿಸುತ್ತಾರೆ. ಈ ಬಾರಿಯೂ ಅದೇ ಆಗಿದೆ” ಎಂದು ಬಿಹಾರದ ಫಲಿತಾಂಶದ ಮೂಲಕ ಪ್ರಧಾನಿ ತಮ್ಮ ಮಾತನ್ನು ಸ್ಪಷ್ಟಪಡಿಸಿದರು. ಇದು ಕೇವಲ ಬಿಹಾರದ ಮಾತಲ್ಲ, ಇಡೀ ದೇಶದಲ್ಲಿ ಜನರು ಅಭಿವೃದ್ಧಿ, ಸ್ಥಿರತೆ ಮತ್ತು ಆತ್ಮವಿಶ್ವಾಸಕ್ಕೆ ಮತ ಹಾಕುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಸಾರಿದರು.
ಪ್ರಧಾನಿ ತಮ್ಮ ಭಾಷಣದಲ್ಲಿ ಆರ್ಥಿಕತೆಯ ಬಲವನ್ನೂ ಪ್ರಮುಖವಾಗಿ ಪ್ರಸ್ತಾಪಿಸಿದರು. “ಜಗತ್ತು ಇಂದು ಭಾರತದ ಪ್ರಜಾಪ್ರಭುತ್ವದ ಜೊತೆಗೆ ನಮ್ಮ ಆರ್ಥಿಕತೆಯ ಸ್ಥಿತಿಸ್ಥಾಪಕತ್ವವನ್ನೂ ಗಮನಿಸುತ್ತಿದೆ. ಪ್ರಜಾಪ್ರಭುತ್ವ ಸಾಧಿಸಬಲ್ಲದು ಎಂಬುದನ್ನು ಭಾರತ ಸಾಬೀತುಪಡಿಸಿದೆ” ಎಂದು ಹೇಳಿದರು.
ಈ ಚಳಿಗಾಲದ ಅಧಿವೇಶನದಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ. ಮಹಿಳಾ ಮೀಸಲಾತಿ ಮಸೂದೆ, ವನ್ ನೇಷನ್ ವನ್ ಎಲೆಕ್ಷನ್, ಆರ್ಥಿಕ ಸುಧಾರಣೆಗಳು, ಡಿಜಿಟಲ್ ಇಂಡಿಯಾ ಮುಂದುವರಿದ ಹಂತ ಇವೆಲ್ಲವೂ ದೇಶದ ಭವಿಷ್ಯವನ್ನು ರೂಪಿಸುವಂಥವು. ಆದರೆ ಈ ಎಲ್ಲಾ ಚರ್ಚೆಗಳು ಅರ್ಥಪೂರ್ಣವಾಗಬೇಕು, ರಾಷ್ಟ್ರದ ಆದ್ಯತೆಗಳು ಮುಂಚೂಣಿಯಲ್ಲಿರಬೇಕು ಎಂಬುದು ಪ್ರಧಾನಿಯ ಆಶಯ.
“ಎಲ್ಲಾ ಪಕ್ಷಗಳು ರಚನಾತ್ಮಕವಾಗಿ ತೊಡಗಿಸಿಕೊಳ್ಳಬೇಕು ಎಂದು ನಾನು ಆಹ್ವಾನಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಎತ್ತಿ, ದೇಶವನ್ನು ಮುಂದೆ ಕೊಂಡೊಯ್ಯೋಣ” ಎಂದು ಪ್ರಧಾನಿ ಕರೆ ನೀಡಿದರು.





