ಹುಣಸೂರು, ನವೆಂಬರ್ 28: ನಾಗರಹೊಳೆ-ಬಂಡೀಪುರ ಹುಲಿ ಸಂರಕ್ಷಿತ ವಲಯಕ್ಕೆ ಹೊಂದಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ ಹುಲಿ ಆತಂಕ ಮತ್ತೊಮ್ಮೆ ತಲೆಎತ್ತಿದೆ. ಸರಗೂರು, ಹೆಚ್.ಡಿ.ಕೋಟೆ ತಾಲ್ಲೂಕುಗಳ ನಂತರ ಈಗ ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ಹುಲಿ ದಾಳಿ ನಡೆದಿದ್ದು, ಇಬ್ಬರು ರೈತರು ಕೂದಲೆಳೆಯಷ್ಟು ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ.
ಗೌಡನಕಟ್ಟೆ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರಾದ ಪ್ರಕಾಶ್ (45) ಮತ್ತು ಸ್ವಾಮಿ (38) ಅವರ ಮೇಲೆ ಹುಲಿ ಆಕ್ರಮಣ ಮಾಡಿದೆ. ಇಬ್ಬರೂ ರಾಗಿ ಕಟಾವು ಕೆಲಸದಲ್ಲಿ ನಿರತರಿದ್ದ ವೇಳೆ ಹುಲಿ ಘರ್ಜಿಸುತ್ತಾ ಬಂದಿದೆ. ಹುಲಿಯನ್ನ ಕಂಡೊಡನೆ ಇಬ್ಬರೂ ಜೋರಾಗಿ ಕಿರುಚಿಕೊಂಡಿದ್ದಾರೆ. ಅಕ್ಕಪಕ್ಕದ ಹೊಲಗಳಲ್ಲಿದ್ದ ಇತರ ರೈತರು ಮತ್ತು ಕಾರ್ಮಿಕರು ಕೂಡಾ ಒಟ್ಟಿಗೆ ಕೂಗಾಡಿದ್ದರಿಂದ ಹುಲಿ ಆತಂಕಗೊಂಡು ತಕ್ಷಣವೇ ಹಿಂದೆ ಸರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ದಾಳಿ ನಡೆದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಹುಲಿಯ ಪಾದಚಿತ್ರಗಳು ಮತ್ತು ಎರಡು ಮರಿಗಳ ಗುರುತುಗಳು ಪತ್ತೆಯಾಗಿವೆ. ಹುಲಿ ತನ್ನ ಮರಿಗಳ ಜೊತೆಯಲ್ಲೇ ಈ ಪ್ರದೇಶದಲ್ಲಿ ವಿಹಾರ ಮಾಡುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಕಾರಣದಿಂದಲೇ ಹುಲಿ ಮನುಷ್ಯರ ಮೇಲೆ ಆಕ್ರಮಣಕಾರಿ ವರ್ತನೆ ತೋರುತ್ತಿದೆ ಎಂಬ ಅಂದಾಜು ಇದೆ.
ಈ ಘಟನೆಯಿಂದ ಆತಂಕಗೊಂಡ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ, ರೇಂಜ್ ಫಾರೆಸ್ಟ್ ಅಧಿಕಾರಿಗಳನ್ನು ಸುತ್ತುವರೆದು ಆಕ್ರೋಶ ವ್ಯಕ್ತಪಡಿಸಿದರು. ಹುಲಿ ಸೆರೆ ಹಿಡಿಯುವವರೆಗೂ ಇಲ್ಲಿಂದ ಎಲ್ಲಿ ಹೋಗುತ್ತೀರಿ ? ಎಂದು ರೈತರು ಪಟ್ಟು ಹಿಡಿದರು. ಮಹಿಳೆಯರು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು ತಕ್ಷಣವೇ ಹುಲಿ ಸೆರೆ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾಗರಹೊಳೆಯಿಂದ ಆಗಮಿಸಿದ ನಾಲ್ಕು ಆನೆಗಳು, ಡಾ. ವಾಸುದೇವ್ ಮೂರ್ತಿ ನೇತೃತ್ವದ ಖ್ಯಾತ ಹುಲಿ ಸೆರೆ ತಂಡ, ಕ್ಯೂಆರ್‌ಟಿ ತಂಡ, ಡ್ರೋನ್ ತಂಡ ಮತ್ತು 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗುರುವಾರ ಬೆಳಗ್ಗೆಯಿಂದ ಕೇಜ್ ಹಾಕುವ ಕಾರ್ಯ ಆರಂಭವಾಗಿದೆ. ಜತೆಗೆ ಗ್ರಾಮದ ಸುತ್ತಮುತ್ತ 10 ಕಡೆ ಟ್ರಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಗೌಡನಕಟ್ಟೆ, ಕೆರೆಹಳ್ಳಿ, ಹಿರೇಹಳ್ಳಿ, ಉದ್ದೂರು ಸುತ್ತಮುತ್ತಲಿನ ಗ್ರಾಮಗಳ ರೈತರು, ನಾವು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ರಾತ್ರಿ ಹೊಲಕ್ಕೆ ಹೋಗಲು ಭಯ, ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರಿಕೆ ಎಂದು ಗ್ರಾಮಸ್ಥರು ಕಣ್ಣೀರಿಟ್ಟರು.
ಕಳೆದ ಎರಡು ತಿಂಗಳಿನಿಂದ ಮೈಸೂರು ಜಿಲ್ಲೆಯಲ್ಲಿ ಹುಲಿ ಆತಂಕ ನಿರಂತರವಾಗಿದೆ. ಸರಗೂರಿನಲ್ಲಿ ಒಬ್ಬ ವೃದ್ಧೆ, ಹೆಚ್.ಡಿ.ಕೋಟೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈಗ ಹುಣಸೂರಿನಲ್ಲಿ ಈ ಘಟನೆ ನಡೆದಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಅರಣ್ಯ ಇಲಾಖೆಯು ಗ್ರಾಮಸ್ಥರಿಗೆ ಒಂಟಿಯಾಗಿ ಹೊಲಕ್ಕೆ ಹೋಗಬೇಡಿ, ಗುಂಪಾಗಿ ಹೋಗಿ, ಜೋರಾಗಿ ಮಾತಾಡುತ್ತಾ ಇರಿ, ರಾತ್ರಿ ಹೊಲಕ್ಕೆ ಹೋಗುವುದನ್ನ ತಪ್ಪಿಸಿ ಎಂದು ಸೂಚನೆ ನೀಡಿದೆ.





