ನವದೆಹಲಿ: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಂಧ್ ಪ್ರದೇಶದ ಬಗ್ಗೆ ಅತ್ಯಂತ ಆಸಕ್ತಿ ಮತ್ತು ಚರ್ಚೆಗೆ ಗ್ರಾಸವಾಗುವ ಹೇಳಿಕೆ ನೀಡಿದ್ದಾರೆ. ಇಂದು ಸಿಂಧ್ ಭಾರತದ ಗಡಿಯೊಳಗಿಲ್ಲದಿರಬಹುದು, ಆದರೆ ಭವಿಷ್ಯದಲ್ಲಿ ಗಡಿರೇಖೆಗಳು ಬದಲಾಗಬಹುದು. ಯಾರಿಗೆ ಗೊತ್ತು ನಾಳೆ ಸಿಂಧ್ ಮತ್ತೆ ಭಾರತಕ್ಕೆ ಸೇರಿಕೊಳ್ಳಬಹುದು ಎಂದು ಹೇಳಿದ್ದಾರೆ.
ಮೊರಾಕೊದಲ್ಲಿ ಸೆಪ್ಟೆಂಬರ್ 22, 2025 ರಂದು ಭಾರತೀಯ ಸಮುದಾಯದೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ನಾಗರಿಕತೆಯ ದೃಷ್ಟಿಯಿಂದ ಸಿಂಧ್ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ. ಭೌಗೋಳಿಕ ಗಡಿಗಳು ಬದಲಾಗಬಹುದು, ಆದರೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಬಾಂಧವ್ಯ ಎಂದಿಗೂ ಬದಲಾಗುವುದಿಲ್ಲ ಎಂದು ಒತ್ತಿ ಹೇಳಿದರು.
ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಪುಸ್ತಕವನ್ನು ಉಲ್ಲೇಖಿಸಿದ ಅವರು, ಸಿಂಧ್ ಜನರಲ್ಲಿ ಬಹುಪಾಲು ಹಿಂದೂಗಳೇ ಆಗಿದ್ದಾರೆ. ವಿಭಜನೆಯಾದರೂ ಅಡ್ವಾಣಿಯವರಂತಹ ಅನೇಕ ಸಿಂಧಿ ಕುಟುಂಬಗಳು ಇಂದಿಗೂ ಸಿಂಧ್ ಅನ್ನು ಭಾರತದಿಂದ ಬೇರ್ಪಡಿಸಲಾಗಿದೆ ಎಂಬುದನ್ನು ಒಪ್ಪಿಕೊಂಡಿಲ್ಲ. ಅವರ ಮನಸ್ಸಿನಲ್ಲಿ ಸಿಂಧ್ ಇನ್ನೂ ಭಾರತದ ಭಾಗವೇ ಎಂದು ಹೇಳಿದರು.
#WATCH | Delhi: Defence Minister Rajnath Singh says, “…Today, the land of Sindh may not be a part of India, but civilisationally, Sindh will always be a part of India. And as far as land is concerned, borders can change. Who knows, tomorrow Sindh may return to India again…”… pic.twitter.com/9Wp1zorTMt
— ANI (@ANI) November 23, 2025
ಸಿಂಧ್ ನದಿಯ ಪವಿತ್ರತೆಯನ್ನು ಕುರಿತು ಮಾತನಾಡಿದ ರಾಜನಾಥ್, ಭಾರತದಾದ್ಯಂತ ಹಿಂದೂಗಳು ಸಿಂಧು ನದಿಯನ್ನು ಗಂಗೆಯಂತೆಯೇ ಪವಿತ್ರವೆಂದು ಪೂಜಿಸುತ್ತಾರೆ. ಆಶ್ಚರ್ಯದ ಸಂಗತಿಯೆಂದರೆ, ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಅನೇಕ ಮುಸ್ಲಿಮರು ಕೂಡ ಸಿಂಧ್ ನದಿಯ ನೀರನ್ನು ಮೆಕ್ಕಾದ ಜಮ್ಜಮ್ ನೀರಿನಷ್ಟೇ ಪವಿತ್ರವೆಂದು ಭಾವಿಸುತ್ತಾರೆ. ಇದು ನಮ್ಮ ಸಾಮೂಹಿಕ ನಾಗರಿಕತೆಯ ಸಂಕೇತ ಎಂದು ಹೇಳಿದ್ದಾರೆ
ಇದೇ ಸಂದರ್ಭದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಬಗ್ಗೆಯೂ ರಾಜನಾಥ್ ಸಿಂಗ್ ಮಾತನಾಡಿ, ಪಿಒಕೆಯ ಜನರು ಸ್ವಾತಂತ್ರ್ಯಕ್ಕಾಗಿ ಹಪಹಪಿಸುತ್ತಿದ್ದಾರೆ. ಭಾರತ ಯಾವುದೇ ಆಕ್ರಮಣ ಮಾಡದೇ, ಶಾಂತಿಯುತವಾಗಿ ಪಿಒಕೆಯನ್ನು ಮರಳಿ ಪಡೆಯುತ್ತದೆ ಎಂಬುದು ನನ್ನ ದೃಢ ನಂಬಿಕೆ ಎಂದು ಹೇಳಿದರು.
1947ರ ವಿಭಜನೆಯ ಸಂದರ್ಭದಲ್ಲಿ ಸಿಂಧ್ ಪ್ರಾಂತ್ಯ ಪಾಕಿಸ್ತಾನಕ್ಕೆ ಸೇರಿತು. ಆದರೆ ಅಲ್ಲಿದ್ದ ಲಕ್ಷಾಂತರ ಸಿಂಧಿ ಹಿಂದೂಗಳು ತಮ್ಮ ಪ್ರಾಣ, ಆಸ್ತಿ, ಸಂಸ್ಕೃತಿಯನ್ನು ಬಿಟ್ಟು ಭಾರತಕ್ಕೆ ಆಶ್ರಯ ಹುಡುಕಿಕೊಂಡು ಬಂದರು. ಇಂದಿಗೂ ಭಾರತದಲ್ಲಿ ಸಿಂಧಿ ಸಮುದಾಯವು ತಮ್ಮ ತವರು ಊರಿನ ಕಡೆಗೆ ಅಪಾರ ಕಳಕಳಿ ಹೊಂದಿದೆ. ಅವರು ಎಲ್ಲಿರಲಿ, ಯಾವ ಧರ್ಮವನ್ನು ಅನುಸರಿಸಲಿ ಸಿಂಧಿ ಜನರು ಯಾವಾಗಲೂ ನಮ್ಮವರೇ ಎಂದು ರಾಜನಾಥ್ ಭಾವುಕವಾಗಿ ಹೇಳಿದರು.
ರಾಜನಾಥ್ ಸಿಂಗ್ ಅವರ ಈ ಹೇಳಿಕೆಯು ಕೇವಲ ಭಾವನಾತ್ಮಕ ಮಾತಲ್ಲ, ಬದಲಾಗುತ್ತಿರುವ ಭೂ-ರಾಜಕೀಯ ಸನ್ನಿವೇಶದಲ್ಲಿ ಭಾರತದ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಅಕ್ಷಯ ಚಿನ್ನ ಎಂದೇ ಪ್ರಸಿದ್ಧವಾದ ಸಿಂಧ್ ನದಿಯ ತೀರದ ಭೂಮಿ ಮತ್ತೊಮ್ಮೆ ಭಾರತದ ಮ್ಯಾಪ್‌ನಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇಂದಿಗೂ ಲಕ್ಷಾಂತರ ಭಾರತೀಯರ ಮನದಲ್ಲಿದೆ. ರಾಜನಾಥ್ ಅವರ ಮಾತು ಆ ಆಸೆಗೊಂದು ಧ್ವನಿಯಾಗಿ ಪರಿಣಮಿಸಿದೆ.





