ನವದೆಹಲಿ: ದೆಹಲಿಯ ಹೃದಯಭಾಗದಲ್ಲಿರುವ ಕೆಂಪುಕೋಟೆ ಬಳಿ ನವೆಂಬರ್ 10ರಂದು ಸಂಭವಿಸಿದ ಭಾರೀ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ದಿನೇದಿನೇ ತೀವ್ರಗೊಳ್ಳುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ಕನೇ ಪ್ರಮುಖ ಆರೋಪಿನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ತುಫೈಲ್ ನಿಯಾಜ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಈತನಿಗೆ ಈ ದಾಳಿಯ ಪ್ರಮುಖ ಆರೋಪಿ ಮತ್ತು ಆತ್ಮಹತ್ಯೆ ಬಾಂಬರ್ ಎಂದೇ ಗುರುತಿಸಲಾದ ಉಮರ್‌ನೊಂದಿಗೆ ನೇರ ಸಂಪರ್ಕವಿತ್ತು ಎಂಬುದು ಪತ್ತೆಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ತುಫೈಲ್ ನಿಯಾಜ್ ಕಳೆದ ಕೆಲ ವರ್ಷಗಳಿಂದ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಗುಪ್ತ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾನೆ. ಉಮರ್ ಕಾರ್ಯಚಟುವಟಿಕೆಗಳನ್ನು ಸಂಯೋಜಿಸುವಲ್ಲಿ ಮತ್ತು ಸಹಾಯ ಮಾಡಲು ತುಫೈಲ್ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ತನಿಖಾ ಅಧಿಕಾರಿಗಳು ಶಂಕಿಸಿದ್ದಾರೆ. ಬಂಧನದ ಬಳಿಕ ನಡೆದ ತಪಾಸಣೆಯಲ್ಲಿ, ಇಬ್ಬರ ಮಧ್ಯೆ ನಡೆದಿರುವ ಕರೆ ದಾಖಲೆಗಳು, ಚಾಟ್‌ಗಳು ಮತ್ತು ಹಣ ವರ್ಗಾವಣೆಯ ಸುಳಿವೆಲ್ಲಾ ಸಿಕ್ಕಿರುವುದಾಗಿ ಮೂಲಗಳು ತಿಳಿಸಿವೆ.
ಘಟನೆಯ ಹಿನ್ನೆಲೆ
ನವೆಂಬರ್ 10ರಂದು ಸಂಜೆ 6:40 ರ ಸಮಯದಲ್ಲಿ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಪಾರ್ಕ್ ಮಾಡಲಾಗಿದ್ದ ಹಳೆಯ ಕಾರಿನೊಳಗೆ ಅಳವಡಿಸಲಾಗಿದ್ದ ಸ್ಪೋಟಕ ವಸ್ತುಗಳು ಸ್ಫೋಟಗೊಂಡಿದ್ದವು. ಶಕ್ತಿಶಾಲಿ ಸ್ಫೋಟದಿಂದ ಪಾರ್ಕಿಂಗ್ ಪ್ರದೇಶದಲ್ಲಿ ನಿಂತಿದ್ದ ಹಲವು ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು. ಸ್ಥಳದಲ್ಲಿದ್ದ ಹಲವಾರು ಪ್ರಯಾಣಿಕರು ಮತ್ತು ಸ್ಥಳೀಯರು ಗಾಯಗೊಂಡಿದ್ದು, 15 ಜನರು ದಾರುಣವಾಗಿ ಸಾವನ್ನಪ್ಪಿದ್ದರು.
ದೆಹಲಿ ಕಾರ್ ಬಾಂಬ್ ಸ್ಫೋಟ ಕೇಸ್: ಆತ್ಮಹತ್ಯಾ ಬಾಂಬರ್ ಸಹಾಯಕನ ಬಂಧನ
ನವದೆಹಲಿ: ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಭಯಾನಕ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಹತ್ವದ ಬೆಳವಣಿಗೆಯನ್ನು ಸಾಧಿಸಿದೆ. ಆತ್ಮಹತ್ಯಾ ಬಾಂಬರ್‌ಗೆ ಸಹಾಯ ಮಾಡಿದ್ದ ಕಾಶ್ಮೀರಿ ನಿವಾಸಿಯನ್ನು ಬಂಧಿಸಿದೆ. ಈ ದಾಳಿಯು ನವೆಂಬರ್ 10ರಂದು ಕೆಂಪು ಕೋಟೆ ಪ್ರದೇಶದಲ್ಲಿ ನಡೆದು, ಅಮಾಯಕರ ಜೀವವನ್ನು ಬಲಿ ತೆಗೆದುಕೊಂಡಿತ್ತು. ಹಲವರಿಗೆ ಗಂಭೀರ ಗಾಯಗಳಾಗಿತ್ತು.
ಬಂಧಿತ ಆರೋಪಿಯ ಹೆಸರು ಅಮೀರ್ ರಶೀದ್ ಅಲಿ. ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ತಾಲೂಕಿನ ಸಂಬೂರಾ ಗ್ರಾಮದ ನಿವಾಸಿಯಾದ ಇವನು, ಸ್ಫೋಟಕ್ಕೆ ಬಳಸಲಾದ ಕಾರನ್ನು ನೋಂದಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ದೆಹಲಿ ಪೊಲೀಸರು ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿದ ನಂತರ, ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಕಾರ್ಯಾಚರಣೆಯ ಫಲವಾಗಿ ಅಮೀರ್ ಅವರನ್ನು ದೆಹಲಿಯಲ್ಲೇ ಬಂಧಿಸಲಾಯಿತು. ತನಿಖೆಯಲ್ಲಿ ಬಯಲಾದಂತೆ, ಅಮೀರ್ ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿ ಜೊತೆ ಸೇರಿ ದಾಳಿಯ ಸಂಚು ರೂಪಿಸಿದ್ದಾನೆ. ಸ್ಪೋಟಕ ಸಾಧನ (ಐಇಡಿ)ವನ್ನು ವಾಹನದಲ್ಲಿ ಸಾಗಿಸಲು ಅನುಕೂಲವಾಗುವಂತೆ ಕಾರನ್ನು ಖರೀದಿಸಲು ಅಮೀರ್ ದೆಹಲಿಗೆ ಬಂದಿದ್ದರು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟ ಚಾಲಕನನ್ನು ಉಮರ್ ಉನ್ ನಬಿ ಎಂದು ಗುರುತಿಸಲಾಗಿದೆ. ಪುಲ್ವಾಮಾ ಜಿಲ್ಲೆಯ ನಿವಾಸಿಯಾದ ಇವನು, ಹರಿಯಾಣದ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಜನರಲ್ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದನು. ವಿಧಿವಿಜ್ಞಾನ ಪರೀಕ್ಷೆಗಳ ಮೂಲಕ ಇದನ್ನು ದೃಢಪಡಿಸಲಾಗಿದೆ. ಉಮರ್ ಅವರಿಗೆ ಸೇರಿದ ಮತ್ತೊಂದು ವಾಹನವನ್ನು ಎನ್‌ಐಎ ವಶಪಡಿಸಿಕೊಂಡಿದ್ದು, ಇದನ್ನು ಸಾಕ್ಷ್ಯಕ್ಕಾಗಿ ಪರಿಶೀಲಿಸಲಾಗುತ್ತಿದೆ.
ಈ ಪ್ರಕರಣದಲ್ಲಿ ಎನ್‌ಐಎ ಈಗಾಗಲೇ 73 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಗಾಯಗೊಂಡವರು ಸೇರಿದಂತೆ ಹಲವು ಸಾಕ್ಷಿಗಳ ಹೇಳಿಕೆಗಳು ತನಿಖೆಗೆ ಹೊಸ ಆಯಾಮ ನೀಡಿದೆ. ದೆಹಲಿ ಪೊಲೀಸ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಹರಿಯಾಣ ಪೊಲೀಸ್, ಉತ್ತರ ಪ್ರದೇಶ ಪೊಲೀಸ್ ಮತ್ತು ಇತರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಎನ್‌ಐಎ ಕಾರ್ಯನಿರ್ವಹಿಸುತ್ತಿದೆ.
ಉಮರ್ ಉನ್ ನಬಿ ಒಬ್ಬ ವೈದ್ಯಕೀಯ ಪ್ರಾಧ್ಯಾಪಕನಾಗಿದ್ದರೂ, ಆಘಾತಕಾರಿ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬುದು ತಿಳಿದುಬಂದಿದೆ. ಅಮೀರ್ ರಶೀದ್ ಅಲಿ ಅವರ ಬಂಧನವು ಈ ಪಿತೂರಿಯ ಇನ್ನೊಂದು ಆಯಾಮವನ್ನು ಬಯಲುಮಾಡಿದೆ. ತನಿಖೆಯು ಇನ್ನೂ ಮುಂದುವರಿದಿದೆ. ಇತರ ಆರೋಪಿಗಳನ್ನು ಗುರುತಿಸಲು ಡಿಜಿಟಲ್ ಸಾಕ್ಷ್ಯಗಳು, ಫೋನ್ ರೆಕಾರ್ಡ್‌ಗಳು ಮತ್ತು ಹಣಕಾಸು ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದೆ.





