ಮಹಾರಾಷ್ಟ್ರ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್‌ನಾಥ್ ಪಟ್ಟಣದ ಪ್ರಮುಖ ಫ್ಲೈಓವರ್ ಮೇಲೆ ಶುಕ್ರವಾರ ರಾತ್ರಿ ಭಯಾನಕ ಸರಣಿ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತವು ಕೇವಲ ಕೆಲವೇ ಸೆಕೆಂಡುಗಳಲ್ಲಿ ನಡೆದಿದ್ದು, ಸ್ಥಳೀಯರು ಮತ್ತು ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ.
ಮುಂಬೈ-ಪುಣೆ ದಿಕ್ಕಿನಲ್ಲಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಆ ನಂತರ ಕಾರು ಉರುಳಿ ಎದುರಿನಿಂದ ಬಂದ ಬೈಕ್‌ಗಳ ಸಾಲಿನ ಮೇಲೆ ಬಿದ್ದಿದೆ. ಈ ರಭಸಕ್ಕೆ ಮೂರು ಬೈಕ್‌ಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.
ಕಾರು ಅತಿವೇಗದಲ್ಲಿ ಮತ್ತಷ್ಟು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನೊಬ್ಬ ನೇರವಾಗಿ ಫೈ ಓವರ್ ಮೇಲಿಂದ ಕೆಳಕಡೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರ ಮೂವರು ಸವಾರರು ಕಾರಿನಡಿಯೇ ಸಿಲುಕಿ ಸಾವನ್ನಪ್ಪಿದ್ದಾರೆ. ಗಾಯಾಳುಗಳಲ್ಲಿ ಇಬ್ಬರು ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರನ್ನು ಥಾಣೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮೃತರಲ್ಲಿ ಇಬ್ಬರು ಅಂಬರ್‌ನಾಥ್‌ನ ಸ್ಥಳೀಯ ನಿವಾಸಿಗಳು, ಒಬ್ಬರು ಕಲ್ಯಾಣ್‌ನವರು ಮತ್ತೊಬ್ಬರು ಬದ್ಲಾಪುರದವರು ಎಂದು ಪೊಲೀಸರು ಗುರುತಿಸಿದ್ದಾರೆ. ಗಾಯಾಳುಗಳಲ್ಲಿ ಒಬ್ಬ ಮಹಿಳೆ ಕೂಡ ಇದ್ದಾರೆ. ಅಂಬರ್‌ನಾಥ್ ಠಾಣಾ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ಸಮೀಪದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಮೂವರು ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.





