ಕಲಬುರಗಿ: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ನಡೆಸಿದ ಪಥಸಂಚಲನದ ನಂತರ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ನಡುವೆ ಸಂಘರ್ಷ ಮುಗಿದಿಲ್ಲ. “ಇದು ಅಂತ್ಯವಲ್ಲ, ಸಂಘರ್ಷ ಈಗ ಪ್ರಾರಂಭವಾಗಿದೆ,” ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನ ಚಟುವಟಿಕೆಗಳ ಬಗ್ಗೆ ಹಲವು ಆರೋಪಗಳನ್ನು ಮಾಡಿ, ದಾಖಲೆಗಳೊಂದಿಗೆ ಬಯಲಿಗೆಳೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಥಸಂಚಲನದ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮೊದಲು ಆರ್‌ಎಸ್‌ಎಸ್ ಕೇವಲ ಅರ್ಜಿ ಸಲ್ಲಿಸಿತ್ತು ಎಂದು ಹೇಳಿದರು. ಆದರೆ ಅನುಮತಿಗಾಗಿ ಅರ್ಜಿ ಹಾಕಿ ಎಂದು ಸೂಚಿಸಿದ ನಂತರವೇ ಅದು ಸಲ್ಲಿಕೆಯಾಯಿತು. ಹೊರಗಿನವರು ಬರುತ್ತಾರೆ ಎಂದು ಮೊದಲು ಹೇಳಿದ್ದರು, ಆದರೆ ಈಗ ಎಲ್ಲವೂ ಜಿಲ್ಲಾಡಳಿತದ ಅನುಮತಿ ಮತ್ತು ನಿರ್ದೇಶನದಂತೆ ನಡೆದಿದೆ. ಇದು ಯಾರ ಗೆಲುವು ಅಥವಾ ಸೋಲು ಅಲ್ಲ, ಬದಲಿಗೆ ನಿಯಮ ಮತ್ತು ಕಾನೂನು ಪಾಲನೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಮೂರು ಸಾವಿರ ಜನ ಬರುತ್ತಾರೆ ಎಂದು ಹೇಳಿದ್ದರು, ಆದರೆ ಕೇವಲ ಮುನ್ನೂರು ಮಂದಿ ಮಾತ್ರ ಭಾಗವಹಿಸಿದ್ದಾರೆ. ಆಶೋಕ್ ಅಥವಾ ವಿಜಯೇಂದ್ರ ಬಂದಿದ್ದಾರಾ? ಕಲಬುರಗಿಯಿಂದ ಯಾರಾದರೂ ಹೋಗಿದ್ದಾರಾ? ಚಿತ್ತಾಪುರ ಹೊರತುಪಡಿಸಿ ಹೊರಗಿನವರು ಭಾಗವಹಿಸಿದ್ದರೆ ಅದು ನ್ಯಾಯಾಲಯದ ಆದೇಶ ಉಲ್ಲಂಘನೆ ಎಂದು ಪ್ರಶ್ನಿಸಿದರು.
ಚಿತ್ತಾಪುರದಲ್ಲಿ ಗೈಡ್‌ಲೈನ್ಸ್ ಪ್ರಕಾರವೇ ಪಥಸಂಚಲನ ನಡೆದಿದೆ. ಸರ್ಕಾರದ ನಿರ್ದೇಶನದಂತೆ ಎಷ್ಟು ಜನ ಇರಬೇಕು, ಯಾವ ಮಾರ್ಗದಲ್ಲಿ ಹೋಗಬೇಕು, ಯಾರು ಭಾಗವಹಿಸಬೇಕು ಎಂಬುದನ್ನು ನಾವೇ ನಿರ್ಧರಿಸಿದ್ದೇವೆ. ಎಲ್ಲವೂ ಅದೇ ರೀತಿ ನಡೆದಿದೆ. ಆದರೆ ತಮ್ಮ ಮತ್ತು ಆರ್‌ಎಸ್‌ಎಸ್ ನಡುವಿನ ಸಂಘರ್ಷ ಮುಗಿದಿಲ್ಲ, ಬದಲಿಗೆ ಈಗ ಪ್ರಾರಂಭವಾಗಿದೆ ಎಂದು ದೃಢವಾಗಿ ಹೇಳಿದರು.
ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ ಎಂಬುದು ಪ್ರಮುಖ ಆರೋಪ. ನೋಂದಣಿಯಾದರೆ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಆದಾಯ ತೆರಿಗೆ ತಪ್ಪಿಸಲು ನೋಂದಣಿ ಮಾಡಿಲ್ಲ. ಸಂಘಕ್ಕೆ ನೀಡುವ ದೇಣಿಗೆಯನ್ನು ‘ಗುರುದಕ್ಷಿಣೆ’ ಎಂದು ಕರೆಯುತ್ತಾರೆ. ನೋಂದಣಿಯಿಲ್ಲದ ಸಂಘಕ್ಕೆ ದೇಣಿಗೆ ನೀಡುವವರ ಲೆಕ್ಕಗಳೂ ಆಡಿಟ್ ಆಗಬೇಕು. ದೇವಾಲಯದ ಹುಂಡಿ ಹಣ ಲೆಕ್ಕವಾಗುವಂತೆ ಆರ್‌ಎಸ್‌ಎಸ್ ದೇಣಿಗೆಯೂ ಲೆಕ್ಕದ ವ್ಯಾಪ್ತಿಗೆ ಬರಬೇಕು ಎಂದು ಆಗ್ರಹಿಸಿದರು.
ಕೆಕೆಆರ್‌ಡಿಬಿ ಹಣವನ್ನು ಕಲಬುರಗಿಯಲ್ಲಿ ಆರ್‌ಎಸ್‌ಎಸ್ ಸದಸ್ಯರು ಹೇಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದನ್ನು ಶೀಘ್ರದಲ್ಲೇ ದಾಖಲೆಗಳೊಂದಿಗೆ ಬಯಲಿಗೆಳೆಯುವುದಾಗಿ ಪ್ರಿಯಾಂಕ್ ಘೋಷಿಸಿದರು. ಬಿಹಾರ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ, ಮತದಾರರನ್ನು ಬಿಹಾರದಿಂದ ಕರೆಸುತ್ತಾರೆಯೇ? ಗೆಲುವು-ಸೋಲು ಸಾಮಾನ್ಯ, ನಾವು ಸೋಲು ಒಪ್ಪಿದ್ದೇವೆ. ಆದರೆ ಆಡಳಿತ ವಿರೋಧಿ ಅಲೆ ಇದ್ದರೂ ಪಡೆದ ಮತಗಳ ಬಗ್ಗೆ ಅನುಮಾನ ಇದೆ. ಡೇಟಾ ಬಯಲಾದ ನಂತರ ನೋಡೋಣ. ಆಳಂದ ಮತ್ತು ಮಹಾದೇವಪುರದಲ್ಲಿ ನಡೆದ ಘಟನೆಗಳನ್ನು ದಾಖಲೆಗಳೊಂದಿಗೆ ನೀಡುತ್ತೇವೆ. ಚುನಾವಣಾ ಆಯೋಗದ ಪಾತ್ರ ಏನು ಎಂಬುದು ಬಯಲಾಗಲಿದೆ. ಬಿಹಾರದಲ್ಲಿ ಮಹಿಳೆಯರಿಗೆ ಹಣ ಬಿಡುಗಡೆಗೆ ಅಡ್ಡಿಯಿಲ್ಲ, ಆದರೆ ತೆಲಂಗಾಣದಲ್ಲಿ ಅಡ್ಡಿ ಮಾಡಿತು ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಸಿಎಂ ಹೇಳಿದ್ದೇ ಫೈನಲ್. ಇದೆಲ್ಲ ಮಾಧ್ಯಮ ಚರ್ಚೆಗಳು ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಸಿಎಂ ಮೋದಿ ಅವರೊಂದಿಗೆ ಕಬ್ಬು ವಿಚಾರಗಳನ್ನು ಚರ್ಚಿಸಲಿದ್ದಾರೆ ಎಂದರು. ರಾಹುಲ್ ಗಾಂಧಿ ಅವರನ್ನು ‘ಐರನ್ ಲೆಗ್’ ಎಂದು ಟೀಕಿಸಿದ ಆಶೋಕ್ ಅವರಿಗೆ ಪ್ರತ್ಯುತ್ತರ ನೀಡಿದ ಪ್ರಿಯಾಂಕ್, ಅವರು ಎಂದಾದರೂ ಜನಪರ ಹೋರಾಟ ಮಾಡಿದ್ದಾರಾ? ಅಶೋಕ್ ಅವರ ಕಾಲು ಚೆನ್ನಾಗಿದೆಯಾ? ಗಣವೇಷಧಾರಿಗಳು ಜನರ ಕಣ್ಣೀರು ಒರೆಸಿದ್ದೀರಾ ಎಂದು ಪ್ರಶ್ನಿಸಿದರು.





