ಆಕರ್ಷಕ ಶೀರ್ಷಿಕೆ ಜೊತೆಗೆ ವಿಭಿನ್ನ ಕಥೆ ಹೊಂದಿರುವ ಮಾರ್ನಮಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅಭಿನಯ ಚಕ್ರವರ್ತಿ ಟ್ರೇಲರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ಟ್ರೇಲರ್ ಬಿಡುಗಡೆ ಬಳಿಕ ಕಿಚ್ಚ ಸುದೀಪ್ ಮಾತನಾಡಿ, ಟ್ರೇಲರ್ ಅದ್ಭುತವಾಗಿದೆ. ಇಂಟ್ರೆಸ್ಟಿಂಗ್ ಆಗಿದೆ. ಈ ರೀತಿ ಹಾರ್ಡ್ ವರ್ಕ್, ಈ ರೀತಿ ಇನ್ವಾಲ್ಮೆಂಟ್, ಎಮೋಷನ್ ಇಲ್ಲದೆ ಇಂತಹ ಕಥೆಗಳನ್ನು ಪರದೆ ಮೇಲೆ ತರುವುದು ಚಾಲೆಂಜ್. ಆ ವಿಷಯದಲ್ಲಿ ಈ ತಂಡ ಗೆದ್ದಿದೆ, ನಿರ್ದೇಶಕರು ತುಂಬಾ ಎಫರ್ಟ್ ಹಾಕಿದ್ದಾರೆ. ಅವರದ್ದೇ ಊರಿನ ಕಥೆಯನ್ನು ಪರದೆ ಮೇಲೆ ತರುವುದು ಸುಲಭವಲ್ಲ ಆದರೆ ನಿರ್ದೇಶಕರು ಅದನ್ನು ಸಾಧಿಸಿದ್ದಾರೆ. ಚರಣ್ ರಾಜ್ ಸಂಗೀತ ಚೆನ್ನಾಗಿದೆ. ಈ ಚಿತ್ರ ದೊಡ್ಡ ರೀತಿ ಯಶಸ್ಸು ಕಾಣಲಿದೆ ಎಂದು ಶುಭ ಹಾರೈಸಿದರು.
ನಾಯಕ ರಿತ್ವಿಕ್ ಮಠದ್ ಮಾತನಾಡಿ, ನನ್ನ ಜೀವನದಲ್ಲಿ ಒಬ್ಬ ಸ್ಟಾರ್ ನ ಹತ್ತಿರದಿಂದ ನೋಡಿದ್ದು ಅಂದರೆ ಅದು ಸುದೀಪ್ ಸರ್. ಅವರು ತುಂಬಾ ಸ್ವೀಟ್. ಅವರು ಸಿನಿಮಾ ಅಂದರೆ ಪ್ರೋತ್ಸಾಹ ಕೊಟ್ಟೇ ಕೊಡುತ್ತಾರೆ. ಕರಾವಳಿ ಭಾಗದಲ್ಲಿ ನಡೆದ ಕಥೆಯನ್ನು ಮಾರ್ನಮಿ ಸಿನಿಮಾ ಮೂಲಕ ಹೇಳಲು ಹೊರಟಿದ್ದೇವೆ ನಿಮ್ಮ ಬೆಂಬಲ ಇರಲಿ ಎಂದರು.
ನಿರ್ದೇಶಕ ರಿಶಿತ್ ಶೆಟ್ಟಿ ಮಾತನಾಡಿ, ನಾನು ಕಿಚ್ಚ ಅವರ ಅಭಿಮಾನಿ, ಕಿಚ್ಚ ಸರ್ ಹಾಡುಗಳಿಗೆ ನಾನು ಸ್ಕೂಲ್ ಹಾಗೂ ಗಣೇಶೋತ್ಸವ ಸಮಯದಲ್ಲಿ ಡ್ಯಾನ್ಸ್ ಮಾಡಿದ್ದೆ. ಈಗ ಅವರು ನಮ್ಮ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದಾರೆ. ಇದು ಕನಸೋ? ನನಸೋ? ಎನಿಸುತ್ತಿದೆ. ಡೈರೆಕ್ಟರ್ ಆಗಬೇಕು ಎನ್ನುವುದು ನನ್ನ ಕನಸು, ಅದು ನನಸಾಗಿದೆ. ನನ್ನ ಚಿತ್ರಕ್ಕೆ ಬೇಕಾದ ನಾವಂದುಕೊಂಡ ಎಲ್ಲಾ ಕಲಾವಿದರು, ಟೆಕ್ನಿಷಿಯನ್ ಸಿಕ್ಕಿದಾರೆ. ಈಗ ಸಿನೆಮಾ ನವೆಂಬರ್ 28ಕ್ಕೆ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಕಿಚ್ಚ ಹಾರೈಸಿದ್ದಾರೆ. ಇದು ದೇವರು, ದೊಡ್ಡವರು, ಹೆತ್ತವರ ಆಶೀರ್ವಾದ. ಎಂದರು.
ಕೆಲ ಸಿನಿಮಾಗಳಲ್ಲಿ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಿಶಿತ್ ಶೆಟ್ಟಿ ಮಾರ್ನಮಿ ಸಿನಿಮಾ ಮೂಲಕ ನಿರ್ದೇಶಕರಾಗಿದ್ದಾರೆ. ಚಿತ್ರದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಜೊತೆಗೆ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ , ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ.
ಸಲಗ, ಭೀಮ ಖ್ಯಾತಿಯ ಶಿವಸೇನ ಛಾಯಾಗ್ರಹಣ ಇಲ್ಲಿ ವಿಭಿನ್ನವಾಗಿ ವಿಶೇಷವಾಗಿ ಕಾಣಿಸುತ್ತಿದೆ,
ವರದಾರಜ್ ಕಾಮತ್ ಆರ್ಟ್ ವರ್ಕ್ ಚಿತ್ರದಲ್ಲಿದೆ, ‘ಟಗರು’, ‘ಸಲಗ’, ‘ಭೀಮ’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳ ಖ್ಯಾತಿಯ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ‘ಮಾರ್ನಮಿ’ಗೆ ಮ್ಯೂಸಿಕ್ ನೀಡಿದ್ದಾರೆ. ಅರ್ಜುನ್ ರಾಜ್ ಸಾಹಸ ನಿರ್ದೇಶನ, ಪ್ರತೀಕ್ ಶೆಟ್ಟಿ ಸಂಕಲನ, ವರ್ಷ ಆಚಾರ್ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ, ಸುಧಿ ಆರ್ಯನ್ ಕಥೆ ಬರೆದಿರುವ ‘ಮಾರ್ನಮಿ’ ಸಿನಿಮಾವನ್ನು ಗುನಾಧ್ಯ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ಹಾಗೂ ನಿಶಾಂತ್ ಎನ್ಎನ್ ನಿರ್ಮಾಣ ಮಾಡಿದ್ದಾರೆ.
ಕರಾವಳಿ ಭಾಗದಲ್ಲಿ ನಡೆಯುವ ದಸರಾ ಹಿನ್ನಲೆಯ ಕಥೆಯಲ್ಲಿ ಒಂದು ವಿಭಿನ್ನ ಲವ್ ಸ್ಟೋರಿ ಮಾರ್ನಮಿಯಲ್ಲಿದೆ. ಜೊತೆಗೆ ಆಕ್ಷನ್, ಎಮೋಷನ್, ಹುಲಿ ಕುಣಿತವನ್ನು ಬ್ಲೆಂಡ್ ಮಾಡಿ ಟ್ರೇಲರ್ ನ್ನು ಆಕರ್ಷಕವಾಗಿ ಕಟ್ ಮಾಡಲಾಗಿದೆ. ಕಿಚ್ಚನ ಧ್ವನಿ ಟ್ರೇಲರ್ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ತಿಂಗಳ 28ಕ್ಕೆ ಮಾರ್ನಮಿ ಸಿನಿಮಾ ತೆರೆಗೆ ಬರ್ತಿದೆ.





