ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿಕ ನಡೆದ ನಿಗೂಢ ಸ್ಫೋಟದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಈ ದಾಳಿಯ ತನಿಖೆ ಈಗ ಮತ್ತೊಂದು ಭಯಾನಕ ತಿರುವು ಪಡೆದಿದೆ. ಬಂಧಿತೆ ಡಾ. ಶಾಹೀನ್ ಶಾಹೀದ್ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ನಾಯಕ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ಜೊತೆ ನಂಟು ಹೊಂದಿದ್ದಾಳೆ ಎಂಬ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.
ಸ್ಫೋಟದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಾಗೂ ದೆಹಲಿ ಪೊಲೀಸ್ ವಿಶೇಷ ದಳಗಳು ವ್ಯಾಪಕವಾಗಿ ಹುಡುಕಾಟ ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಲಖ್ನೋ ಮೂಲದ ವೈದ್ಯೆ ಡಾ. ಶಾಹೀನ್ ಶಾಹೀದ್ ಅವರನ್ನು ಬಂಧಿಸಲಾಯಿತು. ಆಕೆಯ ಕಾರಿನಲ್ಲಿ ಎಕೆ–47 ರೈಫಲ್ ಹಾಗೂ ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದರು.
ಆಕೆಯ ವಿಚಾರಣೆ ವೇಳೆ ಹಲವು ಅಚ್ಚರಿಯ ಮಾಹಿತಿಗಳು ಹೊರಬಿದ್ದಿವೆ. ಜೈಶ್-ಎ-ಮೊಹಮ್ಮದ್ ಸಂಘಟನೆಯ ಮಹಿಳಾ ವಿಭಾಗವನ್ನು “ಜಮಾತ್ ಉಲ್ ಮುನಾಯತ್” ಎಂದು ಕರೆಯಲಾಗುತ್ತಿದ್ದು, ಅದರ ಮುಖ್ಯಸ್ಥೆ ಸಾದಿಯಾ ಅಜರ್. ಅಂದರೆ ಮಸೂದ್ ಅಜರ್‌ನ ಸಹೋದರಿ. ಮೂಲಗಳ ಪ್ರಕಾರ, ಸಾದಿಯಾ ಅಜರ್ ಭಾರತದಲ್ಲಿ ಮಹಿಳಾ ಉಗ್ರರನ್ನು ಸಂಘಟಿಸಲು ಹಾಗೂ ತರಬೇತಿ ನೀಡಲು ಪ್ರಯತ್ನಿಸುತ್ತಿದ್ದಾಳೆ. ಈ ಕಾರ್ಯಚಟುವಟಿಕೆಯಲ್ಲಿ ಶಾಹೀನ್ ಪ್ರಮುಖ ಪಾತ್ರವಹಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಶಾಹೀನ್ ಅವರ ವೈದ್ಯ ವೃತ್ತಿಯ ಹಿನ್ನೆಲೆಯನ್ನು ಬಳಸಿಕೊಂಡು, ದೆಹಲಿಯಲ್ಲಿಯೇ ಉಗ್ರರ ವೈದ್ಯಕೀಯ ನೆರವಿನ ನೆಟ್‌ವರ್ಕ್ ರಚಿಸಲು ಪ್ರಯತ್ನಿಸಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ತನಿಖಾ ತಂಡಗಳು ಆಕೆಯ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸುತ್ತಿವೆ.
ಮೂಲಗಳ ಪ್ರಕಾರ, ಈ ತಂಡವು “ಮಹಿಳಾ ಉಗ್ರ ಪಡೆ” ನಿರ್ಮಾಣದ ಯೋಜನೆ ರೂಪಿಸಿತ್ತು. ಇದರ ಉದ್ದೇಶ ಭಾರತದ ವಿವಿಧ ನಗರಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಕೈಗೊಳ್ಳುವುದು ಮತ್ತು ಮಹಿಳಾ ಉಗ್ರರನ್ನು ತರಬೇತಿ ನೀಡಿವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಶಾಹೀನ್ ಹಾಗೂ ಸಾದಿಯಾ ನಡುವೆ ಪಾಕಿಸ್ತಾನದ ಬಹವಲ್‌ಪುರದಿಂದ ನಡೆದ ಕೆಲವು ಚಾಟ್‌ಗಳು ಹಾಗೂ ಹಣ ವರ್ಗಾವಣೆಯ ಸಾಕ್ಷಿಗಳು ದೊರೆತಿರುವುದಾಗಿ ಮೂಲಗಳು ಹೇಳಿವೆ. ಪಾಕಿಸ್ತಾನದ ಇಂಟೆಲಿಜೆನ್ಸ್ ಏಜೆನ್ಸಿ ISI ನಿಂದ ಸಹ ಬೆಂಬಲ ದೊರೆತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಶಾಹೀನ್ ಶಾಹೀದ್ ಅವರನ್ನು 14 ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದೆ. ಸಾದಿಯಾ ಅಜರ್ ಸೇರಿದಂತೆ ಪಾಕಿಸ್ತಾನದಲ್ಲಿರುವ ಇತರ ಉಗ್ರರ ಸಂಪರ್ಕಗಳ ಪತ್ತೆಗಾಗಿ ಇಂಟರ್‌ಪೋಲ್ ಹಾಗೂ NIA ತಂಡಗಳು ಸಹಯೋಗದಲ್ಲಿ ತನಿಖೆ ಮುಂದುವರಿಸಿವೆ.





