ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (Dharmendra) ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಇದೀಗ ಬ್ರೇಕ್ ಬಿದ್ದಿದೆ. 89 ವರ್ಷದ ಹಿರಿಯ ನಟ ಧರ್ಮೇಂದ್ರರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬುಧವಾರ ಬೆಳಗ್ಗೆ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವೈದ್ಯರು ಅಧಿಕೃತವಾಗಿ ದೃಢಪಡಿಸಿದ್ದಾರೆ. ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಸೇರಿದಂತೆ ಅವರ ಕುಟುಂಬದ ಸದಸ್ಯರು ಧರ್ಮೇಂದ್ರರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಮಾಹಿತಿಯ ಪ್ರಕಾರ, ಬೆಳಗ್ಗೆ 7.30ರ ವೇಳೆಗೆ ಧರ್ಮೇಂದ್ರರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. “ಧರ್ಮೇಂದ್ರ ಅವರು ಇದೀಗ ಸ್ಥಿರವಾಗಿದ್ದಾರೆ. ನಾವು ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲು ಸಲಹೆ ನೀಡಿದ್ದೇವೆ” ಎಂದು ವೈದ್ಯರು ತಿಳಿಸಿದ್ದಾರೆ.
ಸುಳ್ಳು ವದಂತಿ ಮತ್ತು ಕುಟುಂಬದ ಆಕ್ರೋಶ
ಕೆಲ ದಿನಗಳಿಂದ “ಧರ್ಮೇಂದ್ರ ನಿಧನ” ಎಂಬ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿತ್ತು. ಈ ಸುದ್ದಿಯ ನಂತರ ಅವರ ಪತ್ನಿ ಹಾಗೂ ಹಿರಿಯ ನಟಿ ಹೇಮಾ ಮಾಲಿನಿ ಮತ್ತು ಪುತ್ರಿ ಇಶಾ ಡಿಯೋಲ್ ಇಬ್ಬರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೇಮಾ ಮಾಲಿನಿ ತಮ್ಮ ಅಧಿಕೃತ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಬರೆದು, “ಇದೊಂದು ಕ್ಷಮಿಸಲು ಅಸಾಧ್ಯವಾದ ಕೆಲಸ! ಚಿಕಿತ್ಸೆ ಪಡೆಯುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಸುಳ್ಳು ಸುದ್ದಿ ಹರಡುವುದು ಅತ್ಯಂತ ಬೇಜವಾಬ್ದಾರಿಯುತ ಕೃತ್ಯ. ದಯವಿಟ್ಟು ಕುಟುಂಬದ ಗೌಪ್ಯತೆಗೆ ಗೌರವ ನೀಡಿ” ಎಂದು ಸ್ಪಷ್ಟಪಡಿಸಿದರು.
ಪುತ್ರಿ ಇಶಾ ಡಿಯೋಲ್‌ನ ಮನವಿ
ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ಸಂದೇಶ ಹಂಚಿಕೊಂಡು, “ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂಬುದು ವಿಷಾದನೀಯ. ನನ್ನ ತಂದೆ ಜೀವಂತವಾಗಿದ್ದಾರೆ ಮತ್ತು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬದ ಗೌಪ್ಯತೆಗೆ ಗೌರವ ನೀಡಿ ಮತ್ತು ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದ್ದಾರೆ.
ಈ ಸಂದೇಶದ ನಂತರ ಅನೇಕ ಬಾಲಿವುಡ್ ನಟರು ಮತ್ತು ಅಭಿಮಾನಿಗಳು ಇಶಾ ಡಿಯೋಲ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮೇಂದ್ರ ಅವರು 1960ರಲ್ಲಿ “ದಿಲ್ ಭಿ ತೇರಾ ಹಮ್ ಭಿ ತೇರೆ” ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ನಂತರದ ಎರಡು ದಶಕಗಳಲ್ಲಿ ಅವರು ಶೋಲೇ, ಚುಪ್ಪಕೆ ಚುಪ್ಪಕೆ, ಸತ್ಯಕಾಮ್, ಆನಂದ್, ಬಿಮಲ್ ರಾಯ್ ಅವರಂತಹ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿದರು. ಒಟ್ಟು 238 ಸಿನಿಮಾಗಳಲ್ಲಿ ಅಭಿನಯಿಸಿದ ಧರ್ಮೇಂದ್ರ ಅವರಲ್ಲಿ 93 ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿವೆ.





