ಬೆಂಗಳೂರಿನಲ್ಲಿ ಕಸ ಸಮಸ್ಯೆಗೆ ಪರಿಹಾರ ಹುಡುಕುತ್ತಿರುವ ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಇದೀಗ ಹೊಸ ಆಯುಧ ತೆಗೆದುಕೊಂಡಿದೆ. ಕಸದ ವಾಹನಕ್ಕೆ ಕಸ ಕೊಡದಿದ್ದರೂ ದಂಡ. ಹೌದು, ಮನೆಯಲ್ಲಿ ಕಸ ಇಟ್ಟುಕೊಂಡು ಕೊಡದೇ ಇದ್ದರೆ, ಅದನ್ನು ಬೇರೆಡೆ ಎಸೆಯುತ್ತಾರೆ ಎಂಬ ಆತಂಕದಿಂದ BSWML ದಂಡದ ಅಸ್ತ್ರಕ್ಕೆ ಮುಂದಾಗಿದೆ. ಈಗಾಗಲೇ ರೋಡ್ನಲ್ಲಿ ಕಸ ಬಿಸಾಡುವವರಿಗೆ ದಂಡ ವಿಧಿಸುತ್ತಿದ್ದ GBA, ಇದೀಗ ಕಸ ಕೊಡದ ಮನೆಗಳ ಮೇಲೂ ನಿಗಾ ಇರಿಸಲಿದೆ. ಹಸಿ-ಒಣ ಕಸ ವರ್ಗೀಕರಣ ಕಡ್ಡಾಯ, ಇಲ್ಲದಿದ್ದರೆ ಫೈನ್.
BSWML ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಮಾತನಾಡಿ, “ಯಾರು ನಿಯಮಿತವಾಗಿ ಕಸ ಕೊಡುವುದಿಲ್ಲವೋ, ಅವರು ಮನೆಯ ತ್ಯಾಜ್ಯವನ್ನು ಹೊರಗಡೆ ಎಸೆಯುತ್ತಾರೆ. ಅಂಥವರನ್ನು ನಮ್ಮ ಸಿಬ್ಬಂದಿ ಗುರುತಿಸಿ ದಂಡ ವಿಧಿಸುತ್ತಾರೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಕೊಡಲೇ ಬೇಕು. ಕಸ ಕೊಡದಿದ್ದರೆ ಕಾನೂನು ಕ್ರಮ ಮತ್ತು ದಂಡ ಎಚ್ಚರಿಕೆ ನೀಡಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಕಸದ ಲಾರಿಗಳು ನಿಯಮಿತವಾಗಿ ಬರುತ್ತಿರುವುದಿಲ್ಲ ಎಂಬ ದೂರುಗಳ ನಡುವೆಯೂ, BSWML ಸಿಬ್ಬಂದಿ ಮನೆಗಳ ಮೇಲೆ ನಿಗಾ ಇರಿಸಿ, ಕಸ ಕೊಡದವರನ್ನು ಪತ್ತೆಹಚ್ಚಲಿದ್ದಾರೆ. ಇದರಿಂದ ರೋಡ್ಗಳಲ್ಲಿ ಕಸ ಸುರಿಯುವುದು ತಡೆಯಲು ಸಾಧ್ಯ ಎಂದು ಅಧಿಕಾರಿಗಳು ಭಾವಿಸಿದ್ದಾರೆ.
ರೋಡ್ ಕಸಕ್ಕೆ ದಂಡದಿಂದ ಮನೆ ಕಸಕ್ಕೆ ನಿಗಾ:
- ರೋಡ್ನಲ್ಲಿ ಕಸ ಬಿಸಾಡುವವರಿಗೆ ₹500-₹5,000 ದಂಡ.
- ಕಸದ ವಾಹನಕ್ಕೆ ಕಸ ಕೊಡದ ಮನೆಗಳ ಮೇಲೆ ದಂಡ + ಎಚ್ಚರಿಕೆ.
- ಹಸಿ ಕಸ (Wet Waste) ಮತ್ತು ಒಣ ಕಸ (Dry Waste) ಪ್ರತ್ಯೇಕ ಬ್ಯಾಗ್ಗಳಲ್ಲಿ ಕೊಡಬೇಕು.
GBA ಮತ್ತು BSWML ಸಂಯುಕ್ತ ಅಭಿಯಾನದ ಮೂಲಕ ನಗರವನ್ನು ಸ್ವಚ್ಛಗೊಳಿಸುವ ಗುರಿ ಹೊಂದಿದೆ. “ಕಸ ಕೊಡದವರು ಅದನ್ನು ಬೇರೆಡೆ ಎಸೆಯುತ್ತಾರೆ . ಇದು ರೋಡ್ ಕಸಕ್ಕೆ ಕಾರಣ” ಎಂದು ಅಧಿಕಾರಿಗಳು ಹೇಳುತ್ತಾರೆ.
ಹಿರಿಯ ನಾಗರಿಕ ಕೆಂಪಣ್ಣ ಮಾತನಾಡಿ, “ಪ್ರತಿದಿನ ಕಸ ಕೊಡದೇ ಇರುವವರಿಗೆ ದಂಡಕ್ಕೆ ನಮ್ಮ ಬೆಂಬಲ ಇದೆ. ಆದರೆ ಕಸದ ವಾಹನಗಳು ನಿಯಮಿತವಾಗಿ ಬರುವುದಿಲ್ಲ. ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಮಾತ್ರ ಬರುತ್ತವೆ. ಇದನ್ನು GBA ಅಧಿಕಾರಿಗಳು ಸರಿಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಕಸ ಸಮಸ್ಯೆ:
ಬೆಂಗಳೂರು ನಗರದಲ್ಲಿ ದಿನಕ್ಕೆ 5,500 ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ 60% ಹಸಿ ಕಸ, 40% ಒಣ ಕಸ. ವರ್ಗೀಕರಣದ ಕೊರತೆಯಿಂದ ಲ್ಯಾಂಡ್ಫಿಲ್ಗಳಲ್ಲಿ ಸಮಸ್ಯೆ. BSWML ಈಗ ದಂಡದ ಭಯದಿಂದ ವರ್ಗೀಕರಣ ಮತ್ತು ಕಸ ಕೊಡುವುದನ್ನು ಕಡ್ಡಾಯಗೊಳಿಸುವ ಯೋಜನೆ ರೂಪಿಸಿದೆ.





