ವಿದೇಶಗಳಲ್ಲಿ ಕಾರ್ಯನಿರ್ವಸುತ್ತಿದ್ದ ದೇಶದ ಕುಖ್ಯಾತ ಮತ್ತು ‘ಮೋಸ್ಟ್ ವಾಂಟೆಡ್’ ಗ್ಯಾಂಗ್‌ಸ್ಟಾರ್‌ಗಳನ್ನು ಭಾರತೀಯ ಭದ್ರತಾ ಸಂಸ್ಥೆಗಳು ಅಮೆರಿಕಾ ಮತ್ತು ಜಾರ್ಜಿಯಾದಲ್ಲಿ ಬಂಧಿಸಲಾಗಿದೆ. ವೆಂಕಟೇಶ್ ಗಾರ್ಗ್ ಮತ್ತು ಭಾನು ರಾಣಾ ಎಂದು ಗುರುತಿಸಲಾಗಿದ್ದು, ವಿದೇಶದಿಂದ ಕುಳಿತುಕೊಂಡೇ ಭಾರತದಲ್ಲಿ ಅಪರಾಧ ಚಟುವಟಿಕೆಗಳನ್ನು ನಿರ್ದೇಶಿಸುತ್ತಿದ್ದರೆಂದು ಪೊಲೀಸರು ಆರೋಪಿಸಿದ್ದಾರೆ. ಇವರನ್ನು ಶೀಘ್ರದಲ್ಲೇ ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹರಿಯಾಣ ಪೊಲೀಸರು ಹಾಗೂ ಇತರ ಭದ್ರತಾ ಸಂಸ್ಥೆಗಳು ಅಮೆರಿಕಾ ಅಧಿಕಾರಿಗಳ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಹರಿಯಾಣದ ನಾರಾಯಣಗಢ ಮೂಲದ ವೆಂಕಟೇಶ್ ಗಾರ್ಗ್, ಅಮೆರಿಕಾದ ಜಾರ್ಜಿಯಾದಲ್ಲಿ ಅಡಗಿದ್ದಾನೆಂಬ ಮಾಹಿತಿ ಆಧರಿಸಿ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದರು. ಗಾರ್ಗ್ ವಿರುದ್ಧ ಭಾರತದಲ್ಲಿ 10 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಕೊಲೆ, ಸುಲಿಗೆ, ದರೋಡೆ, ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳಿವೆ.
ಈತ ಗುರುಗ್ರಾಮದಲ್ಲಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ನಾಯಕನ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದನು. ಆ ಹತ್ಯೆಯ ಬಳಿಕ ಆತ ಭಾರತದಿಂದ ಪಲಾಯನ ಮಾಡಿ ಜಾರ್ಜಿಯಾದಲ್ಲಿ ನೆಲೆಸಿದ್ದ. ವಿದೇಶದಲ್ಲಿದ್ದರೂ ಆತ ದೇಶದೊಳಗೆ ತನ್ನ ಗ್ಯಾಂಗ್ ಮೂಲಕ ಸುಲಿಗೆ ಮತ್ತು ಅಪರಾಧ ಕೃತ್ಯಗಳನ್ನು ಮುಂದುವರೆಸುತ್ತಿದ್ದನು ಎನ್ನಲಾಗಿದೆ.
ಗಾರ್ಗ್ ಅಮೆರಿಕಾದಲ್ಲಿದ್ದ ಮತ್ತೊಬ್ಬ ಕುಖ್ಯಾತ ಗ್ಯಾಂಗ್‌ಸ್ಟಾರ್ ಕಪಿಲ್ ಸಾಂಗ್ವಾನ್ ಜೊತೆ ಕಾರ್ಯನಿರ್ವಹಿಸುತ್ತಿದ್ದ. ಇತ್ತೀಚೆಗೆ ದೆಹಲಿ ಪೊಲೀಸರು ಈ ಸಾಂಗ್ವಾನ್ ಗ್ಯಾಂಗ್‌ನ ನಾಲ್ವರು ಶೂಟರ್‌ರನ್ನು ಬಂಧಿಸಿದ್ದರು. ಅವರು ದೆಹಲಿಯ ಬಿಲ್ಡರ್ ಒಬ್ಬರ ಮನೆ ಹಾಗೂ ತೋಟದ ಮನೆಯಲ್ಲಿ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದರು.
ಬಂಧಿತರಲ್ಲಿ ಮತ್ತೊಬ್ಬನಾದ ಭಾನು ರಾಣಾ ಹರಿಯಾಣದ ಕರ್ನಾಲ್ ಮೂಲದವನು. ಆತ ಪ್ರಸಿದ್ಧ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಹಲವು ವರ್ಷಗಳಿಂದ ಅಮೆರಿಕಾದಲ್ಲೇ ವಾಸಿಸುತ್ತಿದ್ದರೂ, ದೇಶದೊಳಗಿನ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ.
ಭಾನು ರಾಣಾ ವಿರುದ್ಧ ಹರಿಯಾಣ, ಪಂಜಾಬ್ ಹಾಗೂ ದೆಹಲಿಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪಂಜಾಬ್‌ನಲ್ಲಿ ನಡೆದ ಗ್ರೆನೇಡ್ ದಾಳಿ ತನಿಖೆ ವೇಳೆ ಈತನ ಹೆಸರು ಕೂಡ ಹೊರ ಬಿದ್ದಿತ್ತು.
ಕರ್ನಾಲ್‌ನ ವಿಶೇಷ ಕಾರ್ಯಪಡೆ (STF) ಜೂನ್ ತಿಂಗಳಲ್ಲಿ ರಾಣಾನ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಶೂಟರ್‌ರನ್ನು ಬಂಧಿಸಿತ್ತು. ಅವರ ಬಳಿಯಿಂದ ಹ್ಯಾಂಡ್ ಗ್ರೆನೇಡ್‌ಗಳು, ಪಿಸ್ತೂಲುಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.
ವಿದೇಶದಲ್ಲಿ ನೆಲೆಸಿ ದೇಶದಲ್ಲಿ ಅಪರಾಧ
ಭಾರತದ ತನಿಖಾ ಸಂಸ್ಥೆಗಳ ಪ್ರಕಾರ, 20 ಕ್ಕೂ ಹೆಚ್ಚು ಭಾರತೀಯ ಗ್ಯಾಂಗ್‌ಸ್ಟಾರ್‌ಗಳು ವಿದೇಶದಲ್ಲಿ ಅಡಗಿ, ಅಲ್ಲಿಂದಲೇ ತಮ್ಮ ಗ್ಯಾಂಗ್‌ಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳು ಹಾಗೂ ಡಾರ್ಕ್ ವೆಬ್ ಮೂಲಕ ಯುವಕರನ್ನು ಸೇರಿಸಿಕೊಂಡು ದೇಶದಲ್ಲಿ ಸುಲಿಗೆ, ಕೊಲೆ ಹಾಗೂ ದರೋಡೆಗಳಂತಹ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ.
ಅವರಿಂದ ಉದ್ಯಮಿಗಳು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ ನೀಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತೀಯ ಪೊಲೀಸರು ವಿದೇಶದಲ್ಲಿದ್ದ ಹಲವಾರು ಕುಖ್ಯಾತ ಅಪರಾಧಿಗಳನ್ನು ಪತ್ತೆಹಚ್ಚಿ, ವಾಪಸ್ ಕರೆತರಲು ಯಶಸ್ವಿಯಾಗಿದ್ದಾರೆ.
ವೆಂಕಟೇಶ್ ಗಾರ್ಗ್ ಮತ್ತು ಭಾನು ರಾಣಾ ಇವರಿಬ್ಬರನ್ನೂ ಭಾರತಕ್ಕೆ ಗಡೀಪಾರು ಮಾಡುವ ಕಾನೂನು ಪ್ರಕ್ರಿಯೆ ಆರಂಭಗೊಂಡಿದೆ. ವಿದೇಶದಲ್ಲಿರುವ ಉಳಿದ ಮೋಸ್ಟ್ ವಾಂಟೆಡ್ ಅಪರಾಧಿಗಳನ್ನೂ ಪತ್ತೆಹಚ್ಚಿ ದೇಶಕ್ಕೆ ತರಲು ಭಾರತೀಯ ಏಜೆನ್ಸಿಗಳು ಸಜ್ಜಾಗಿವೆ.





