ಅಮೆರಿಕದ ಕೆಂಟುಕಿ ರಾಜ್ಯದ ಲೂಯಿಸ್‌ವಿಲ್ಲೆಯ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಭಯಾನಕ ಅಪಘಾತ ನಡೆದಿದೆ. ಯುನೈಟೆಡ್ ಪಾರ್ಸೆಲ್ ಸರ್ವೀಸ್ (ಯುಪಿಎಸ್) ಸರಕು ವಿಮಾನವೊಂದು ಟೇಕ್‌ಆಫ್ ಸಮಯದಲ್ಲಿ ನಿಯಂತ್ರಣ ತಪ್ಪಿ ಸ್ಫೋಟಗೊಂಡು, ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಕನಿಷ್ಠ 11 ಜನರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ತಿಳಿಸಿದ್ದಾರೆ.
ಅಪಘಾತ ಸಂಜೆ 5:15ರ ಸುಮಾರು ನಡೆದಿದೆ. ಹವಾಯಿಯ ಹೊನೊಲುಲುಗೆ ಹೊರಡುತ್ತಿದ್ದ ಯುಪಿಎಸ್ ಕಾರ್ಗೋ ವಿಮಾನವು ರನ್‌ವೇಯಲ್ಲಿ ಚಲಿಸುತ್ತಿದ್ದಾಗ ಎಡ ರೆಕ್ಕೆಯಲ್ಲಿ ಜ್ವಾಲೆಗಳು ಮತ್ತು ದಟ್ಟ ಹೊಗೆ ಕಾಣಿಸಿಕೊಂಡವು. ಕ್ಷಣಾರ್ಧದಲ್ಲಿ ವಿಮಾನ ನೆಲದಿಂದ ಸ್ವಲ್ಪ ಎತ್ತರಕ್ಕೆ ಏರಿತು. ಆದರೆ ನಿಯಂತ್ರಣ ತಪ್ಪಿ ದೊಡ್ಡ ಬೆಂಕಿಯ ಚೆಂಡಿನಂತೆ ನೆಲಕ್ಕೆ ಅಪ್ಪಳಿಸಿತು ಮತ್ತು ಭೀಕರ ಸ್ಫೋಟ ಸಂಭವಿಸಿತು. ಈ ದೃಶ್ಯವನ್ನು ಸೆರೆಹಿಡಿದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ರನ್‌ವೇಯ ಕೊನೆಯಲ್ಲಿರುವ ಕಟ್ಟಡದ ಛಾವಣಿ ಸಂಪೂರ್ಣ ಚೂರುಚೂರಾಗಿದೆ.
ವಿಮಾನದಲ್ಲಿ ಮೂವರು ಸಿಬ್ಬಂದಿ ಮಾತ್ರ ಇದ್ದರು ಎಂದು ತಿಳಿದುಬಂದಿದೆ. ಅವರ ಸ್ಥಿತಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಘಟನೆಯ ತನಿಖೆ ಆರಂಭಿಸಿದ್ದು, ವಿಮಾನದ ಕಪ್ಪು ಪೆಟ್ಟಿಗೆಗಳನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ. ತಾಂತ್ರಿಕ ದೋಷ, ಎಂಜಿನ್ ಸಮಸ್ಯೆ ಅಥವಾ ಪೈಲಟ್ ದೋಷ ಎಂಬುದು ತನಿಖೆಯ ನಂತರವೇ ತಿಳಿಯಲಿದೆ. ಅಪಘಾತದ ನಂತರ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಇದರಿಂದ ಸಾವಿರಾರು ಪ್ಯಾಕೇಜ್‌ಗಳ ಸಾಗಾಣಿಕೆಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ.
A UPS MD-11 cargo plane crashed shortly after takeoff from Louisville at 5:15 p.m., striking two businesses and sparking a massive fire. At least three people are confirmed dead, 11 injured, and the toll is expected to rise as crews search the wreckage. pic.twitter.com/hfsdsuxc8w
— Inkabodcrane (@InkabodCrane) November 5, 2025
ಗವರ್ನರ್ ಬೆಶಿಯರ್ ಅವರು ಸ್ಥಳಕ್ಕೆ ಭೇಟಿ ನೀಡಿ, ತುರ್ತು ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದರು. “ಕನಿಷ್ಠ ಮೂವರು ಸತ್ತಿದ್ದಾರೆ ಎಂದು ಭಾವಿಸಲಾಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚಾಗಬಹುದು. 11 ಜನರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ” ಎಂದು ಅವರು ಹೇಳಿದರು. ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ತಂಡಗಳು ಸ್ಥಳದಲ್ಲಿ ಕಾರ್ಯನಿರತವಾಗಿವೆ.





