ನವದೆಹಲಿ: 9/11ರ ಭೀಕರ ದಾಳಿಯ ಮಾಸ್ಟರ್‌ಮೈಂಡ್, ಅಲ್‌ಖೈದಾ ಉಗ್ರ ಸಂಘಟನೆಯ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ 2001ರಲ್ಲಿ ಅಫ್ಘಾನಿಸ್ತಾನದ ಟೋರಾಬೋರಾ ಗುಡ್ಡದಲ್ಲಿ ಅಡಗಿರುವ ಮಾಹಿತಿ ಇದ್ದರೂ ಅಮೆರಿಕದ ಸಿಐಎಗೆ ಆತನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಆತ ಮಹಿಳೆಯರ ವೇಷ ಧರಿಸಿ, ಕತ್ತಲ ರಾತ್ರಿಯ ಲಾಭ ಪಡೆದು ಪಾಕಿಸ್ತಾನಕ್ಕೆ ಪರಾರಿಯಾದ ಆಘಾತಕಾರಿ ಸತ್ಯವನ್ನು ಸಿಐಎನ ಮಾಜಿ ಅಧಿಕಾರಿ ಜಾನ್ ಕಿರಿಯಾಕು ಬಹಿರಂಗಪಡಿಸಿದ್ದಾರೆ. ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಘಟನೆಯನ್ನು ವಿವರಿಸಿದ್ದಾರೆ.
2001ರ ಅಕ್ಟೋಬರ್‌ನಲ್ಲಿ, ಒಸಾಮಾ ಬಿನ್ ಲಾಡೆನ್ ಮತ್ತು ಅಲ್‌ಖೈದಾದ ಇತರೆ ಪ್ರಮುಖ ನಾಯಕರು ಟೋರಾಬೋರಾ ಗುಡ್ಡದಲ್ಲಿ ಅಡಗಿರುವ ಬಗ್ಗೆ ಸಿಐಎಗೆ ಖಚಿತ ಮಾಹಿತಿ ಲಭಿಸಿತ್ತು. ಈ ಗುಡ್ಡದಲ್ಲಿ ಆತನನ್ನು ಬಂಧಿಸಲು ಸಿಐಎ ತಂಡ ಯೋಜನೆ ರೂಪಿಸಿತು. “ನಾವು ಲಾಡೆನ್‌ಗೆ ಬೆಟ್ಟದಿಂದ ಕೆಳಗಿಳಿಯುವಂತೆ ಸೂಚಿಸಿದ್ದೆವು. ಆದರೆ, ಆತನ ತಂಡದಿಂದ ನಮಗೆ ಸಂದೇಶ ಬಂತು. ಮೊದಲು ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸುತ್ತೇವೆ, ನಂತರ ಲಾಡೆನ್ ಕೆಳಗಿಳಿಯುತ್ತಾನೆ ಎಂದು,” ಎಂದು ಕಿರಿಯಾಕು ಹೇಳಿದ್ದಾರೆ. ಈ ಸಂದೇಶವನ್ನು ತಲುಪಿಸಿದ್ದು ಅವರ ಅನುವಾದಕ. ಈ ಅನುವಾದಕನ ಮಾತುಗಳನ್ನು ನಂಬಿದ ಆಗಿನ ಜನರಲ್ ಫಾಕ್ಸ್, ಮಹಿಳೆಯರು ಮತ್ತು ಮಕ್ಕಳ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದರು.
ಆದರೆ, ಆತ ಮಹಿಳೆಯರ ವೇಷ ಧರಿಸಿ, ಕತ್ತಲ ರಾತ್ರಿಯಲ್ಲಿ ಪಿಕ್-ಅಪ್ ಟ್ರಕ್‌ನಲ್ಲಿ ಪಾಕಿಸ್ತಾನದ ಕಡೆಗೆ ತಪ್ಪಿಸಿಕೊಂಡ. “ನಮ್ಮ ಕಮಾಂಡರ್ ಆಫ್ ಸೆಂಟ್ರಲ್ ಕಮಾಂಡ್‌ನ ಅನುವಾದಕ ಆಗಲೇ ಅಲ್‌ಖೈದಾದೊಂದಿಗೆ ಒಳ ಒಡಂಬಡಿಕೆ ಮಾಡಿಕೊಂಡಿದ್ದ. ಆತ ನಮ್ಮ ಸೇನೆಗೆ ಒಳನುಸುಳಿದ ಗೂಢಚಾರನಾಗಿದ್ದ ಎಂಬುದು ನಮಗೆ ಆಗ ತಿಳಿದಿರಲಿಲ್ಲ,” ಎಂದು ಕಿರಿಯಾಕು ತಿಳಿಸಿದ್ದಾರೆ.
ಆರಂಭದಲ್ಲಿ, ಸಿಐಎ ತನ್ನ ಗಮನವನ್ನು ಕೇವಲ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮೇಲೆ ಕೇಂದ್ರೀಕರಿಸಿತ್ತು. ಆದರೆ, 2002ರ ಮಾರ್ಚ್‌ನಲ್ಲಿ ಲಾಹೋರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರರ ಮನೆಯ ಮೇಲೆ ದಾಳಿ ನಡೆಸಿದಾಗ, ಅಲ್‌ಖೈದಾದ ತರಬೇತಿ ಕೈಪಿಡಿಯೊಂದು ಪತ್ತೆಯಾಯಿತು. ಈ ದಾಳಿಯ ಬಳಿಕವೇ ಸಿಐಎಗೆ ಅಲ್‌ಖೈದಾ ಮತ್ತು ಲಷ್ಕರ್‌ನ ನಡುವಿನ ಸಂಪರ್ಕದ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿತು. “ಈ ಘಟನೆಯವರೆಗೆ ನಾವು ಈ ಎರಡು ಉಗ್ರ ಸಂಘಟನೆಗಳ ಒಡನಾಟವನ್ನು ಸಂಪೂರ್ಣವಾಗಿ ಗಮನಿಸಿರಲಿಲ್ಲ. ಆ ಬಳಿಕವೇ ಈ ಎರಡು ಗುಂಪುಗಳ ಜಂಟಿ ಕಾರ್ಯಾಚರಣೆಯ ಬಗ್ಗೆ ತನಿಖೆ ಆರಂಭವಾಯಿತು,” ಎಂದು ಕಿರಿಯಾಕು ವಿವರಿಸಿದ್ದಾರೆ.





