ಬೆಂಗಳೂರು, ಅ.18: “ಗುತ್ತಿಗೆದಾರರ ನೋವು ನಮಗೆ ಅರ್ಥವಾಗುತ್ತದೆ, ಆದರೆ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದ್ದು, “ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಬಜೆಟ್ ಮಿತಿಯನ್ನು ಮೀರಿ ಹೆಚ್ಚು ಕೆಲಸಗಳನ್ನು ಕೊಟ್ಟಿದ್ದಾದ್ದರು. ಇದರಿಂದ ಸಮಸ್ಯೆ ಹೆಚ್ಚಾಗಿದೆ. ನಾನು ನನ್ನ ಕೈಲಾದಷ್ಟು ಬಿಲ್ ಪಾವತಿಸಿದ್ದೇನೆ. ಗುತ್ತಿಗೆದಾರರು ಎಂದರೆ ಇಲ್ಲಿ ಬಂದಿರುವವರು ಮಾತ್ರ ಅಲ್ಲ. ರಾಜ್ಯದಾದ್ಯಂತ ಇದ್ದಾರೆ. ನಮ್ಮ ಇಲಾಖೆಯಲ್ಲಿ ಯೋಜನೆಗಳ ಬಿಲ್ ಬಾಕಿ ನೀಡಲು 50-100 ಕೋಟಿ ಇರುತ್ತದೆ. ಹಣಕಾಸು ಇಲಾಖೆ ನಮಗೆ ನೀಡುವ ಹಣವನ್ನು ನಿಮಗೆ ನೀಡುತ್ತೇವೆ, ನೀವೇ ಯಾವ ಗುತ್ತಿಗೆದಾರರಿಗೆ ಹಂಚಿ ಎಂದು ಹೇಳಿದೆ. ಅವರು ಆ ರೀತಿ ಆಗುವುದಿಲ್ಲ” ಎಂದು ತಿಳಿಸಿದರು.
“ಉದಾಹರಣೆಗೆ ನನ್ನದೇ ನೀರಾವರಿ ಇಲಾಖೆಯಲ್ಲಿ ಸುಮಾರು 200 ಕೋಟಿಯಷ್ಟು ಅನುದಾನವಿದೆ. ಆದರೆ 17, 000 ಕೋಟಿಯಷ್ಟು ಬಿಲ್ ಬಾಕಿಯಿದೆ. ನಮ್ಮ ಬಳಿ ಇರುವ 200 ಕೋಟಿ ಹಣದಲ್ಲಿ ಯಾರ ಬಾಕಿ ಬಿಲ್ ಗಳನ್ನು, ಯಾವ ಲೆಕ್ಕದಲ್ಲಿ ತೀರಿಸಲಿ. ಬಾಕಿ ಬಿಲ್ ಗಳನ್ನು ತೀರಿಸಿ ಎಂದು ಯಾವ ಅಧಿಕಾರಿಗೆ ಸೂಚನೆ ನೀಡಲಿ?” ಎಂದರು.
ನೂತನ ವ್ಯವಸ್ಥೆ ತರಲು ಮುಂದಾಗಿದ್ದೇನೆ
“ಸಣ್ಣಪುಟ್ಟ ಗುತ್ತಿಗೆದಾರರಿಗೆ 15 ಲಕ್ಷ 20 ಲಕ್ಷ ಒಂದು ಕೋಟಿ ಬಿಲ್ ನೀಡಬೇಕಾಗಿದೆ. ದೊಡ್ಡ ದೊಡ್ಡ ಗುತ್ತಿಗೆದಾರರಿಗೆ 2,000 ಕೋಟಿ ರೂಪಾಯಿಗಳಷ್ಟು ಬಿಲ್ ಬಾಕಿಯಿದೆ. ಇವರೆಲ್ಲಾ ಸಾಕಷ್ಟು ಒತ್ತಡ ತರುತ್ತಿದ್ದಾರೆ. ಎಲ್ಲರ ಬೇಡಿಕೆಗಳನ್ನು ಈಡೇರಿಸಲು ಆಗುತ್ತಿಲ್ಲ. ಆದ ಕಾರಣಕ್ಕೆ ನೂತನ ವ್ಯವಸ್ಥೆ ತರಲು ಹೊರಟಿದ್ದೇನೆ. ಇದರ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇನೆ” ಎಂದು ಹೇಳಿದರು.
ಕಮಿಷನ್ ವಿಚಾರವಾಗಿ ದೂರು ನೀಡಿ ಎಂದಿದ್ದೇನೆ
“ಗುತ್ತಿಗೆದಾರರು ಕಮಿಷನ್ ವಿಚಾರವಾಗಿ ಕೇಳಿದರು. ಇದರ ಬಗ್ಗೆ ದೂರು ನೀಡಿ, ಇದರ ಬಗ್ಗೆ ತನಿಖೆ ನಡೆಸೋಣ ಎಂದು ಅವರಿಗೆ ಹೇಳಿದ್ದೇನೆ. ಬಿಲ್ ಗಳ ಬಿಡುಗಡೆಗೆ ಕಮಿಷನ್ ಬೇಡಿಕೆ ವಿಚಾರವಾಗಿ ಯಾರು ಸಹ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ. ಕಮಿಷನ್ ವಿಚಾರದ ಬಗ್ಗೆ ಆರೋಪಿಸಿಲ್ಲ ಎಂದು ಗುತ್ತಿಗೆದಾರರು ಈಗ ಹೇಳುತ್ತಿದ್ದಾರೆ” ಎಂದು ಅವರು ಹೇಳಿದರು.
“ಪಾಲಿಕೆ ವ್ಯಾಪ್ತಿಯಲ್ಲಿ ಶೇ.10 ರಷ್ಟು ಬಾಕಿ ಬಿಲ್ ಮೊತ್ತವನ್ನು ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ. ಕಾನೂನಾತ್ಮಕವಾಗಿ ಹೇಗೆ ಕೆಲಸ ಮಾಡಬಹುದೆಂದು ನಾನು ಆಲೋಚಿಸುತ್ತೇನೆ. ಕಾಮಗಾರಿಗಳ ಬಗೆಗಿನ ದೂರುಗಳು ಹಾಗೂ ತನಿಖೆ ವರದಿಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇವರುಗಳಿಗೆ ಏನೇನು ಸಹಾಯ ಮಾಡಿಕೊಂಡು ಬರಬೇಕು ಅದೆಲ್ಲವನ್ನು ನಾನು ಮಾಡಿದ್ದೇನೆ. ಇದರ ಬಗ್ಗೆ ಅವರಿಗೂ ಅರಿವಿದೆ. ಇತರೆ ಇಲಾಖೆಗಳಲ್ಲಿ ಒಂದಷ್ಟು ಸಮಸ್ಯೆಗಳಾಗಿವೆ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗೆ ಸೂಕ್ತ ದಿನಾಂಕವನ್ನು ನಿಗದಿ ಮಾಡಿ ಕೊಡುತ್ತೇನೆ. ಅವರ ಬಳಿಯೂ ಸಮಸ್ಯೆಗಳು ಹಾಗೂ ಮನವಿಗಳನ್ನು ತಿಳಿಸಲಿ” ಎಂದರು.
ವಿಪಕ್ಷದಲ್ಲಿದ್ದಾಗಲೇ ಗುತ್ತಿಗೆದಾರರಿಗೆ ಎಚ್ಚರಿಸಿದ್ದೆ
ವಿಪಕ್ಷದಲ್ಲಿದ್ದಾಗ ಬಜೆಟ್ ಮೊತ್ತಕ್ಕಿಂತ ಹೆಚ್ಚುವರಿ ಕಾಮಗಾರಿಗಳನ್ನ ತೆಗೆದುಕೊಳ್ಳಲಾಗುತ್ತಿದೆ ಎಂದು ನೀವು ಎಚ್ಚರಿಸಿದ್ದಿರಿ ಎಂದು ಕೇಳಿದಾಗ, “ನಾನು ವಿರೋಧ ಪಕ್ಷದಲ್ಲಿದ್ದಾಗ ಎಚ್ಚರಿಕೆ ನೀಡಿದ್ದೆ. ಬಜೆಟ್ ಇಲ್ಲ, ದುಡ್ಡಿಲ್ಲ, ಯಾವ ಗುತ್ತಿಗೆದಾರರು ಸಹ ಕೆಲಸಗಳನ್ನು ತೆಗೆದುಕೊಳ್ಳಬೇಡಿ. ಯಾರಿಗೂ ಸಹ ಹಣ ಸಿಗುವುದಿಲ್ಲ ಎಂದು ಎಚ್ಚರಿಸಿದ್ದೆ. ಜೊತೆಗೆ ನಾನು ಇದಕ್ಕೆ ಹೊಣೆಯಾಗುವುದಿಲ್ಲ ಎಂದೂ ತಿಳಿಸಿದ್ದೆ. ಮಾಧ್ಯಮಗಳು ಈ ಹೇಳಿಕೆಯನ್ನು ಬೇಕಾದರೆ ತೆಗೆದು ನೋಡಬಹುದು” ಎಂದರು.
ಜನವರಿ ವೇಳೆಗೆ ಬಾಕಿ ಬಿಲ್ ಮೊತ್ತಗಳನ್ನ ಬಿಡುಗಡೆ ಮಾಡುವುದಾಗಿ ನೀವು ಭರವಸೆ ನೀಡಿದ್ದೀರಿ ಎನ್ನುವ ಬಗ್ಗೆ ಕೇಳಿದಾಗ, “ನಮ್ಮ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡಲಾಗುವುದು. ಕೆಲಸ ಮಾಡಿರುವವರಿಗೆ ಹಣ ನೀಡಲೇಬೇಕು. ಆರ್ಥಿಕ ಇಲಾಖೆಯಿಂದ ಹಣ ಬಂದಾಗ ಮಾತ್ರ ನಾವೇನಾದರೂ ಮಾಡಲು ಸಾಧ್ಯ” ಎಂದರು.
ಡಿಸೆಂಬರ್ ವೇಳೆಗೆ ಬಾಕಿ ಬಿಲ್ ಮೊತ್ತ ಬಿಡುಗಡೆಯಾಗದಿದ್ದರೆ ಹೈಕಮಾಂಡ್ ಭೇಟಿ ಮಾಡಿ ದೂರು ನೀಡುವ ಬಗ್ಗೆ ಗುತ್ತಿಗೆದಾರರ ಹೇಳಿಕೆ ಬಗ್ಗೆ ಕೇಳಿದಾಗ, “ನಾನೇ ಅವರಿಗೆ ಸಮಯ ನಿಗದಿ ಮಾಡಿ ಕೊಡುತ್ತೇನೆ, ದೂರು ನೀಡಲಿ” ಎಂದರು.