ಮೈಸೂರು, ಅಕ್ಟೋಬರ್ 14: ಉದ್ಯೋಗ ಮೇಳಗಳು ಕೇವಲ ಉದ್ಯೋಗವನ್ನು ಪಡೆಯುವ ವೇದಿಕೆಯಾಗಿ ಮಾತ್ರವಲ್ಲ, ಯುವಕರ ಕೌಶಲ್ಯವನ್ನು ಹೆಚ್ಚಿಸಿಕೊಂಡು ವೃತ್ತಿಜೀವನದಲ್ಲಿ ಮುನ್ನಡೆಯಲು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತವೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಮತ್ತು ಇತರ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ, ಕರ್ನಾಟಕ ಸರ್ಕಾರವು ರಾಜ್ಯದ ಯುವಜನತೆಯ ಕೌಶಲ್ಯ ಮತ್ತು ಉದ್ಯೋಗದ ಕನಸುಗಳಿಗೆ ರೆಕ್ಕೆ ನೀಡಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಕಾರದೊಂದಿಗೆ, KSDC ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಮೇಳವು ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಮುಂದಾಗಿದೆ.
ಈ ಬೃಹತ್ ಉದ್ಯೋಗ ಮೇಳವು ಮೈಸೂರಿನ ಐತಿಹಾಸಿಕ ಮಹಾರಾಜ ಮೈದಾನದಲ್ಲಿ ಅಕ್ಟೋಬರ್ 17, 2025 ರಂದು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನಡೆಯಲಿದೆ. ಈ ಮೇಳದಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಲಿವೆ. ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಎಸ್. ಯುಕೇಶ್ ಕುಮಾರ್ ಮಾತನಾಡಿ, ಈ ಉದ್ಯೋಗ ಮೇಳವು ಯುವಕರಿಗೆ ನೇರ ಸಂದರ್ಶನದ ಮೂಲಕ ಒಂದೇ ದಿನದಲ್ಲಿ ತಮ್ಮ ಅರ್ಹತೆಗೆ ತಕ್ಕ ಉದ್ಯೋಗವನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ. ಆದ್ದರಿಂದ, ಯುವಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು SSLC, PUC, ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಅಥವಾ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಯಾರು ಬೇಕಾದರೂ ಅರ್ಹರಾಗಿರುತ್ತಾರೆ. ಈ ಮೇಳವು ಕೇವಲ ಪದವೀಧರರಿಗೆ ಸೀಮಿತವಾಗಿಲ್ಲ, ಬದಲಾಗಿ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರುವವರೂ ಭಾಗವಹಿಸಬಹುದು. ಈ ಮೇಳದಲ್ಲಿ ಭಾಗವಹಿಸುವ ಕಂಪನಿಗಳು ತಮಗೆ ಬೇಕಾದ ಕೌಶಲ್ಯ, ಜ್ಞಾನ, ಮತ್ತು ಅನುಭವವನ್ನು ಹೊಂದಿರುವ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುತ್ತಾರೆ.
ಈ ಉದ್ಯೋಗ ಮೇಳಕ್ಕೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ, ಅರ್ಹ ಅಭ್ಯರ್ಥಿಗಳು udyogamela.ksdckarnataka.com ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ವಿವರಗಳನ್ನು ಭರ್ತಿ ಮಾಡಬೇಕು. ಸಂದರ್ಶನಕ್ಕೆ ಹಾಜರಾಗುವಾಗ, ಅಭ್ಯರ್ಥಿಗಳು ತಮ್ಮ ರೆಸ್ಯೂಮ್‌ನ ಸಾಕಷ್ಟು ಪ್ರತಿಗಳನ್ನು ತರಲು ಮರೆಯಬಾರದು. ಹೆಚ್ಚಿನ ಮಾಹಿತಿ ಮತ್ತು ಸ್ಪಷ್ಟೀಕರಣಕ್ಕಾಗಿ 9606494308 ಸಹಾಯವಾಣಿಗೆ ಕರೆ ಮಾಡಬಹುದು. ಯುವ ನಿಧಿಯಡಿಯಲ್ಲಿ ನೋಂದಾಯಿತ ಯುವಕರನ್ನು ಸಹ ಈ ಮೇಳದಲ್ಲಿ ಪರಿಗಣಿಸಲಾಗುವುದು ಎಂದು ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಯುಕೇಶ್ ಕುಮಾರ್ ತಿಳಿಸಿದ್ದಾರೆ.